ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಕುಣಿಯುವುದು ಬಿಡಬೇಕು – ಸಚಿವ ಸಿಸಿ ಪಾಟೀಲ್

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ. ಕೆಂಪಣ್ಣನವರು ಕಾಂಗ್ರೆಸ್ಸಿನ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಬಿಟ್ಟು, ಇನ್ನು ಮುಂದೆಯಾದರೂ ಗುತ್ತಿಗೆದಾರರ ಹಿತರಕ್ಷಣೆಗೆ ಸ್ಪಂದಿಸಲು ಸರ್ಕಾರದೊಂದಿಗೆ ಹೆಗಲು ಕೊಟ್ಟು ಪ್ರಾಮಾಣಿಕವಾಗಿ ಶ್ರಮಿಸಲು ಮುಂದಾಗಲಿ ಎಂಬುದಾಗಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಹಿಂದೆ ಇದೇ ಗುತ್ತಿಗೆದಾರರ ಸಂಘದವರು ಬಂದು ಟೆಂಡರ್ ಪ್ರಕ್ರಿಯೆಗಳನ್ನು ಸುಧಾರಿಸುವ ಅನಿವಾರ್ಯತೆಯಿದೆ ಎಂದು ಸರ್ಕಾರದ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು, ಟೆಂಡರ್ ಪಾರದರ್ಶಕತೆ ಕಾಯ್ದುಕೊಳ್ಳಲು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಕೆಂಪಣ್ಣನವರು ಇವುಗಳನ್ನೆಲ್ಲಾ ಮಾಧ್ಯಮಗಳ ಮುಂದೆ ಹೇಳದೇ ಕೇವಲ ಆರೋಪಗಳ ಹಿಂದೆಯೇ ಗಿರಕಿ ಹೊಡೆಯುತ್ತಾ, ಪರೋಕ್ಷವಾಗಿ ಕಾಂಗ್ರೆಸ್ಸಿನ ಮುಖವಾಣಿಯಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ.

ಯಾವುದೇ ಸಂಘಟನೆಗಳಿಗೆ ತಮ್ಮ ಸದಸ್ಯರ ಹಿತರಕ್ಷಣೆ ಮುಖ್ಯವಾಗಬೇಕೇ ವಿನಃ ಅಂಥ ಸಂಘಟನೆಗಳು ರಾಜಕೀಯ ಸ್ವರೂಪ ಪಡೆದುಕೊಳ್ಳಬಾರದು. ಆದರೆ ಕೆಂಪಣ್ಣನವರ ಮಾತಿನ ವೈಖರಿಯನ್ನು ಗಮನಿಸಿದರೆ ರಾಜಕೀಯದ ವಾಸನೆ ದಟ್ಟವಾಗಿರುವುದು ಸ್ಪಷ್ಟವಾಗುತ್ತದೆ. ಕೆಂಪಣ್ಣನವರ ಹಿಂದಿರುವ ಸೂತ್ರದಾರರು ಯಾರೆಂಬ ಬಗ್ಗೆ ಮಾಧ್ಯಮದವರೇ ಬೆಳಕು ಚೆಲ್ಲಿದರೆ ಅವರ ಆರೋಪಗಳಲ್ಲಿರುವ ಸತ್ಯಾಸತ್ಯತೆ ಏನು ಎಂಬುದು ಸ್ಪಷ್ಟವಾಗುತ್ತದೆ.

ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಏಕರೂಪ ದರಪಟ್ಟಿಯನ್ನು ಇದೇ ಮೊದಲ ಬಾರಿ ಜಾರಿಗೆ ತಂದಿರುವ ಮೂಲಕ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ಶಿಸ್ತು ಮತ್ತು ಸರಳ ವಿಧಾನಗಳನ್ನು ಅನುಸರಿಸಲು ಅವಕಾಶ ಮಾಡಿಕೊಡಲಾಗಿದೆ.

ಲೋಕೋಪಯೋಗಿ ಇಲಾಖೆಯ 10 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ಕಾಮಗಾರಿಗಳ ಪ್ರಸ್ತಾವನೆಗಳನ್ನು ಪರಿಶೀಲಿಸಲು ರಾಜ್ಯಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜು ಪಟ್ಟಿ ಪರಿಶೀಲನಾ ತಜ್ಞರ ಸಮಿತಿ ರಚನೆಯ ಪ್ರಕ್ರಿಯೆಯು ಜಾರಿಯಲ್ಲಿದೆ. ಅಷ್ಟೇ ಅಲ್ಲ ಈಗಾಗಲೇ 50 ಕೋಟಿ ರೂ ಗಳಿಗಿಂತ ಹೆಚ್ಚಿನ ಟೆಂಡರ್ ನೀಡಿಕೆ ಪ್ರಕ್ರಿಯೆಯನ್ನು ಅತ್ಯಂತ್ಯ ನ್ಯಾಯಸಮ್ಮತವಾಗಿ ಮತ್ತು ಸಮರ್ಪಕವಾಗಿ ನಡೆಸಲು ಅನುಕೂಲವಾಗುವಂತೆ ಈಗಾಗಲೇ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ.

ಟೆಂಡರ್ ಪ್ರಕ್ರಿಯೆ ಮತ್ತು ಗುತ್ತಿಗೆದಾರರ ಕೆಲಸಗಳಿಗೆ ಬಿಲ್ ಪಾವತಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಕುರಿತು ಮತ್ತು ವಿಳಂಬ ಪ್ರಕ್ರಿಯೆ ತಪ್ಪಿಸುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಬಿಲ್ಲುಗಳ ಪಾವತಿಯಲ್ಲಿ ಜೇಷ್ಠತೆಯನ್ನು ಪರಿಗಣಿಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಕಾಮಗಾರಿಗಳ ಬಿಲ್ಲುಗಳನ್ನು First come first serve ಆಧಾರದ ಮೇಲೆ ಪಾವತಿಸಲು ತಿಳಿಸಲಾಗಿದೆ. ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾದ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಮತ್ತು ಬಿಲ್ಲುಗಳ ಪಾವತಿಯಲ್ಲಿ ಜೇಷ್ಠತೆ ಅನುಸರಿಸಲು ಸೂಕ್ತ ತಂತ್ರಾಂಶವನ್ನು ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸಲು ಈಗಾಗಲೇ ಸೂಚಿಸಲಾಗಿದೆ.

ಕಾಮಗಾರಿಗಳ ಕಾರ್ಯಯೋಜನೆಯ ಅನುಷ್ಠಾನವನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೇಜಿಂಗ್ ಮಾಡುವುದನ್ನು ಪರಿಶೀಲಿಸಲು ತಿಳಿಸಲಾಗಿದ್ದು, ಅದರಂತೆ ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪ್ಯಾಕೇಜ್ ಮೊತ್ತವನ್ನು ಗರಿಷ್ಠ 10 ಲಕ್ಷ ರೂ. ಗಳಿಗೆ ಸೀಮಿತಗೊಳಿಸಬೇಕೆಂದು ಸರ್ಕಾರಿ ಸುತ್ತೋಲೆ ಹೊರಡಿಸಲಾಗಿದೆ. ಸಂಬಂಧಪಟ್ಟ ಪ್ರಾಧಿಕಾರಗಳನ್ನು ನೇಮಿಸಿ, ತನ್ಮೂಲಕವೇ ಟೆಂಡರುಗಳನ್ನು ಆಹ್ವಾನಿಸಲು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ.

ಹೀಗೆ ಕಾಮಗಾರಿಗಳ ಗುತ್ತಿಗೆ ಹಂಚಿಕೆಯಲ್ಲಿ ಹಲವು ನೂತನ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು,ಒಂದು ವೇಳೆ ಈ ಯಾವುದೇ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಬೇಕಾದರೆ ಅಥವಾ ಗುತ್ತಿಗೆದಾರರ ಮತ್ತಿತರ ಸಮಸ್ಯೆಗಳಿದ್ದರೆ ಕೆಂಪಣ್ಣ ನವರು ಸರ್ಕಾರದ ಜೊತೆ ಮಾತುಕತೆ ನಡೆಸಲು ಮುಂದೆ ಬಂದರಲ್ಲಿ ನಮ್ಮ ಸರ್ಕಾರವು ಅವರೊಂದಿಗೆ ಚರ್ಚಿಸಲು ಮುಕ್ತ ಮನಸ್ಸು ಹೊಂದಿದೆ. ಇದನ್ನು ಬಿಟ್ಟು ವಿರೋಧ ಪಕ್ಷದ ಮುಖಂಡರ ಮನೆ ಬಾಗಿಲನ್ನು ತಡಕಾಡುತ್ತಾ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿಯೇ ಕಾಲ ಕಳೆಯುತ್ತಿದ್ದರೆ ಅದರಿಂದ ಗುತ್ತಿಗೆದಾರರ ಹಿತರಕ್ಷಣೆ ಹೇಗೆ ಸಾಧ್ಯ? ಕೇವಲ ಒಮ್ಮೆ ಮಾತ್ರ ಕೆಂಪಣ್ಣನವರು ಈವರೆಗೆ ನನ್ನನ್ನು ಸ್ವತ: ಭೇಟಿಯಾಗಿದ್ದರಷ್ಟೇ. ಆದರೆ ಅವರ ಕಳಕಳಿ ಕೇವಲ ಮಾಧ್ಯಮಗಳಿಗೆ ಪದೇಪದೇ ನೀಡುವ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಇದೆ ಎಂದು ಆರೋಪಿಸುವ ಕೆಂಪಣ್ಣನವರು, ತುಸು ಹಿಂತಿರುಗಿ ನೋಡಿದರೆ ಒಳ್ಳೆಯದು. ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಬಾಕಿಯಿದ್ದಿದ್ದ ಬಿಲ್ಲುಗಳ ಬಗ್ಗೆ ಕೆಂಪಣ್ಣನವರು ವಿವರಗಳನ್ನು ಬಿಚ್ಚಿಟ್ಟಿದ್ದರೆ ಒಳ್ಳೆಯದಿತ್ತು.

ತಮ್ಮ ಗುತ್ತಿಗೆದಾರರ ಸಂಘವನ್ನು ಒಡೆಯಲು ನಾನು (ಲೋಕೋಪಯೋಗಿ ಸಚಿವ) ಪ್ರಯತ್ನಿಸುತ್ತಿರುವುದಾಗಿ ಕೆಂಪಣ್ಣನವರು ಆರೋಪಿಸಿರುವುದರಲ್ಲಿ ಯಾವುದೇ ಹುರುಳಿಲ್ಲ. 2013 ರಲ್ಲಿಯೇ ಸ್ಥಾಪನೆಗೊಂಡ ಉತ್ತರ ಕರ್ನಾಟಕ ಭಾಗದ ಗುತ್ತಿಗೆದಾರರನ್ನು ಒಳಗೊಂಡ ಸಂಘದವರು ತಮ್ಮ ಅಹವಾಲುಗಳನ್ನು ಸರ್ಕಾರಕ್ಕೆ ತಿಳಿಸಿದ್ದು ಕೂಡಾ ಕೆಂಪಣ್ಣನವರಿಗೆ ತಪ್ಪಾಗಿ ಕಂಡಿದ್ದು ನನಗ ಆಶ್ಚರ್ಯ ತಂದಿದೆ. ಗುತ್ತಿಗೆದಾರರ ಯಾವುದೇ ಸಂಘವಾಗಲಿ, ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ಬಂದಾಗ ಸಚಿವನಾಗಿ ನಾನು ಅವರನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಸರ್ಕಾರವು ಯಾವುದೇ ಪೂರ್ವಗ್ರಹವಿಲ್ಲದೇ ಎಲ್ಲಾ ಸಂಘಟನೆಗಳನ್ನೂ ಸಮಾನವಾಗಿ ಕಾಣುವ ಮನಸ್ಥಿತಿ ಹೊಂದಿದೆ. ಇದಕ್ಕೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸುವುದು ಯಾರಿಗೂ ಶೋಭೆಯಲ್ಲ. ತಮ್ಮ ವ್ಯಕ್ತಿ ಪ್ರತಿಷ್ಠೆಗಿಂತ ಇಡೀ ಗುತ್ತಿಗೆದಾರರ ಸಮುದಾಯದ ಹಿತವೇ ಮುಖ್ಯವೆಂಬುದು ಕೆಂಪಣ್ಣನವರಿಗೆ ಮನವರಿಕೆಯಾದರೆ ಒಳ್ಳೆಯದು.

ಗುತ್ತಿಗೆದಾರರಿಗೆ ಸರ್ಕಾರದಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸುವ ಕೆಂಪಣ್ಣನವರು, ಇದಕ್ಕೆ ಪೂರಕವಾದ ದಾಖಲೆಗಳನ್ನು ಕೇಳಿದರೆ ಕೊಡುವುದಕ್ಕೆ ಸಿದ್ದರಿಲ್ಲ. ಸೂಕ್ತ ದಾಖಲೆಗಳಿಲ್ಲದೇ ಸರ್ಕಾರ ತನಿಖೆ ನಡೆಸುವುದು ಹೇಗೆ ? ಎಂದು ಪ್ರಶ್ನಿಸಿದರು.

ಒಂದು ವೇಳೆ ಅವರು ಸೂಕ್ತ ದಾಖಲೆಗಳನ್ನು ನೀಡಿದರೆ, ಆ ಬಗ್ಗೆ ಕೂಲಂಕಷ ತನಿಖೆ ನಡೆಸಲು ನಮ್ಮ ಸರ್ಕಾರ ಸದಾ ಸಿದ್ಧವಿದೆ ಎಂಬುದನ್ನು ನಾನು ಈಗಲೂ ಪುನರುಚ್ಛರಿಸುತ್ತಿದ್ದೇನೆ. ಅಷ್ಟೇ ಅಲ್ಲ ಯಾವುದೇ ಅವ್ಯವಹಾರ, ಅಕ್ರಮಗಳ ವಿರುದ್ಧ ಲೋಕಾಯುಕ್ತರಿಗೆ ಅಥವಾ ನ್ಯಾಯಾಲಯಗಳಿಗೆ ದೂರು ನೀಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ ಎಂಬುದನ್ನು ನಾನು ಮತ್ತೊಮ್ಮೆ ನೆನಪಿಸುತ್ತೇನೆ ಎಂದರು.

About The Author