www.karnatakatv.net: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಕಡಿಮೆ ಮಾಡುತ್ತಿದೆ, ಆದ ಕಾರಣ ರಾಜ್ಯಾದ್ಯಂತ ಕೊರೊನಾ ನಿಯಮಗಳನ್ನು ಸಡಿಲಗೊಳಿಸುತ್ತಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಕೂಡಾ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್‌ಗಳು ಮಧ್ಯರಾತ್ರಿಯವರೆಗೆ ಮತ್ತು ಅಂಗಡಿಗಳು ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತವೆ. ಹೊಸ ಮಾರ್ಗಸೂಚಿಗಳ ಅನ್ವಯ ಕೆಲವು ಷರತ್ತುಗಳೊಂದಿಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸಲಾಗಿದೆ. ಹಾಗೇ ರೆಸ್ಟೋರೆಂಟ್ ಸಿಬ್ಬಂದಿ ಸಂಪೂರ್ಣವಾಗಿ ಲಸಿಕೆ ಪಡೆದಿರುವುದು ಅತ್ಯಗತ್ಯವಾಗಿದೆ. ರೆಸ್ಟೋರೆಂಟ್‌ಗೆ ಪ್ರವೇಶ ಪಡೆಯುವ ಗ್ರಾಹಕರೂ ಸಹ ಲಸಿಕೆ ಹಾಕಿಸಿಕೊಂಡಿರಬೇಕು. ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಹರಡುವುದನ್ನು ತಡೆಯಲು ಸಮಯ ನಿಯಂತ್ರಣ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಸಂದರ್ಶಕರು ಸಂಪೂರ್ಣ ಲಸಿಕೆ ಪಡೆದಿರುವುದು ಮುಂತಾದ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಉದ್ಧವ್ ಠಾಕ್ರೆ ಅವರ ಕಚೇರಿಯು ಹೊಸ ಮಾರ್ಗಸೂಚಿಯನ್ನು ಟ್ವೀಟ್ ಮಾಡಿದೆ, ಸೋಮವಾರ ಸಮಯವನ್ನು ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೂ ಆದೇಶದಲ್ಲಿ ಮುಂಬರುವ ಹಬ್ಬದ ದೃಷ್ಟಿಯಿಂದ, ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಸಮಯಕ್ಕೆ ನಿರ್ಬಂಧಗಳು ಹೇರುವ ಸಾಧ್ಯತೆ ಇದೆ. ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆಯಾಗುತ್ತಿರುವದರಿಂದ, ರಾಜ್ಯ ಸರ್ಕಾರ ಮನೋರಂಜನಾ ಉದ್ಯಾನವನಗಳು ಮತ್ತು ಚಿತ್ರಮಂದಿರಗಳನ್ನು ಮತ್ತೆ ತೆರೆಯುವುದಾಗಿ ಘೋಷಿಸಿತ್ತು. ಮಾಲ್ ಮತ್ತು ಚಿತ್ರಮಂದಿರಗಳು ಅಕ್ಟೋಬರ್ 22 ರಿಂದ ತೆರೆದಿರುತ್ತವೆ ಎಂದು ತಿಳಿಸಲಾಗಿದೆ. ಮಹಾರಾಷ್ಟ್ರದ ಅತಿದೊಡ್ಡ ಹಬ್ಬವಾದ ಗಣೇಶ ಚತುರ್ಥಿ ಸಮಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು. ಹೆಚ್ಚು ಜನರು ಸೇರದಂತೆ ತಡೆಯಲು ನಿಯಮಗಳನ್ನು ಜಾರಿಗೊಳಿಸಿತ್ತು. ಆನ್‌ಲೈನ್ ದರ್ಶನ ವ್ಯವಸ್ಥೆ ಮಾಡಲು ಅವಕಾಶ ನೀಡಿತ್ತು.