Hubli News: ಐತಿಹಾಸಿಕ ಛಬ್ಬಿ ಗಣಪತಿ ಉತ್ಸವಕ್ಕೆ ದಿನಗಣನೆ: 199ನೇ ವರ್ಷಾಚರಣೆ ಸಂಭ್ರಮಕ್ಕೆ ಸನ್ನದ್ಧ..!

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಛಬ್ಬಿ ಗಣಪತಿಗೆ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಇದೆ. 199 ನೇ ಸಂಭ್ರಮದ ಗಣೇಶೋತ್ಸವ ಆಚರಣೆ, ಛಬ್ಬಿ ಗ್ರಾಮಕ್ಕೆ ಮೆರಗು ತರಲು ಸನ್ನದ್ಧವಾಗುತ್ತಿದೆ. ಕುಲಕರ್ಣಿ ಮನೆತನದ ಕೆಂಪು ಗಣಪತಿ ಆಗಸ್ಟ್ 27 ರಿಂದ ಮೂರು ದಿನಗಳ ಸಂಭ್ರಮಾಚರಣೆಗೆ ಈಗ ದಿನಗಣನೆ ಆರಂಭವಾಗಿದೆ.

ವಿಘ್ನ ನಿವಾರಕ, ಭಕ್ತಿ ಪ್ರದಾಯಕ, ಗೌರಿಸುತ ವಿನಾಯಕನ ಆರಾಧಿಸುವ ಸಂಭ್ರಮದ ದಿನಗಳು ಸಮೀಪಿಸುತ್ತಿದೆ. ದೇಶಾದ್ಯಂತ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತ ಬಂದಿರುವ ಈ ದೇಶದ ಸಂಸ್ಕೃತಿ ಪರಂಪರೆಯೂ ಹೌದು. ನಾಡಿನಾದ್ಯಂತ ಪ್ರತಿವರ್ಷವೂ ಕೆಲವೆಡೆ ಗಣೇಶೋತ್ಸವ ಸಂಧರ್ಭದಲ್ಲಿ ಕೆಲವು ಮನೆತನಗಳು ವಂಶಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವುದು ಗಮನ ಸೆಳೆಯುತ್ತಿದೆ. ಅವುಗಳಲ್ಲಿ ದಶತಮಾನದ ಆಚರಣೆ ಹೊಸ್ತಿಲಲ್ಲಿರುವ ಕುಲಕರ್ಣಿ ಮನೆತನಗಳ ಐತಿಹಾಸಿಕ ಛಬ್ಬಿಯ ಕೆಂಪು ಗಣಪತಿ ಕೂಡ ಒಂದು.

ಸಕಲ ಸಂಕಷ್ಟ ನಿವಾರಿಸುವ ಗಣಪನ ಆರಾಧನೆಗೆ ದಿನಗಣನೆ ಆರಂಭಗೊಂಡಿದ್ದು,ಈ ಹಿನ್ನಲೆಯಲ್ಲಿ ಛಬ್ಬಿಯ ಕುಲಕರ್ಣಿ ಮನೆತನದ 7 ಮನೆಗಳಾದ ಮೋಹನರಾವ ಹನುಮಂತರಾವ ಕುಲಕರ್ಣಿ, ವಿನಾಯಕ ಕಾಶಿನಾಥ ಕುಲಕರ್ಣಿ, ನಾರಾಯಣ ರಾಮರಾವ ಕುಲಕರ್ಣಿ, ದಿ.ರಾಮಚಂದ್ರ ಅನಂತರಾವ ಕುಲಕರ್ಣಿ, ಸೋಮರಾವ ಶ್ರೀಪಾದರಾವ ಕುಲಕರ್ಣಿ, ವಿಶ್ವನಾಥ ವಾಸುದೇವರಾವ ಕುಲಕರ್ಣಿ ಮಾಲತೇಶ ಶಂಕರರಾವ ಕುಲಕರ್ಣಿ, ಇವರೆಲ್ಲರೂ “ಕೆಂಪು ಗಣಪತಿ” ಉತ್ಸವಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

ಒಂದು ಕೈಯಲ್ಲಿ ತುಂಡಾದ ಹಲ್ಲು, ಇನ್ನೊಂದು ಕೈಯಲ್ಲಿ ಲಿಂಗ, ಮತ್ತೊಂದು ಕೈಯಲ್ಲಿ ಕೊಡಲಿ ಮಗದೊಂದು ಕೈಯಲ್ಲಿ ತ್ರಿಶೂಲ, ಸಿಂಧೂರ ಮೈಬಣ್ಣದ ಗಂಡು ಕಚ್ಚೆ ಧರಿಸಿದ ಈ ವಿಶಿಷ್ಟ ಗಣಪತಿಯನ್ನು ನೋಡಲು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಹೋಗಬೇಕು. ಛಬ್ಬಿ ಗ್ರಾಮದ ಕುಲಕರ್ಣಿ ಮನೆತನಗಳಲ್ಲಿ ಪೂಜಿಸಲಾಗುವ ಕೆಂಪು ಗಣಪತಿಗೆ 198 ವರುಷಗಳ ಇತಿಹಾಸವಿದೆ. ಶ್ರೀ ಗಣಪತಿಯೂ ಜಾಗೃತನೆಂದು ನಾಡಿನ ನಾನಾ ಮೂಲೆಗಳಿಂದ ಅಲ್ಲದೆ ನೆರೆ ರಾಜ್ಯಗಳ ಭಕ್ತರು ಇಲ್ಲಿ ಆಗಮಿಸಿ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಬೇಡಿಕೊಳ್ಳುತ್ತಾರೆ.

ಇನ್ನೂ 1821 ರಲ್ಲಿ ಹಳೆ ಹುಬ್ಬಳ್ಳಿಯ ಶ್ರೀ ದತ್ತ ದೇವಸ್ಥಾನಕ್ಕೆ ಬಂದು ನೆಲೆಸಿದ ಶ್ರೀ ಕೃಷ್ಣಂದ್ರ ಸ್ವಾಮಿಗಳು 1827 ರ ಸುಮಾರಿಗೆ ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಶಾನಭೋಗ ತಮ್ಮಪ್ಪನವರಿಂದ ಪಾದಪೂಜೆ, ಭಿಕ್ಷೆ ಸ್ವೀಕರಿಸಿದ ಗುರುಗಳ ಆದೇಶದಂತೆ ತಮ್ಮಪ್ಪನವರು ಪ್ರತಿ ವರ್ಷ ಶ್ರೀ ಗಣೇಶೋತ್ಸವ ಆರಂಭಿಸಿದರು. ಈ ಉತ್ಸವವನ್ನು ಆಚರಿಸಲು ಆರಂಭಿಸಿದ ನಂತರ ಸಂತಾನವಿಲ್ಲದ ತಮ್ಮಪ್ಪನವರಿಗೆ ಸಂತಾನ ಭಾಗ್ಯ ಒದಗಿಬಂತು. ತಮ್ಮಪ್ಪನವರಿಂದ ಆರಂಭವಾದ ಗಣೇಶೋತ್ಸವ ಈಗ ಏಳನೇ ತಲೆಮಾರಿನವರೆಗೂ ಮುಂದುವರೆದಿದೆ. ಸದ್ಯ ಕುಲಕರ್ಣಿ ಮನೆತನದ 7 ಮನೆಗಳಲ್ಲಿ ಗಣೇಶನನ್ನು ಪೂಜಿಸಲಾಗುತ್ತಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author