ಕೇಂದ್ರ ಸರ್ಕಾರವು ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಮಹಾನಗರಪಾಲಿಕೆಯು ಪ್ರಶಸ್ತಿ ಹೊಸ್ತಿಲಲ್ಲಿದೆ. ಸಾಂಸ್ಕೃತಿಕ ನಗರಿಯು ಯಾವ ಪ್ರಶಸ್ತಿಗಳಿಸಿದೆ ಎಂಬುದು ಜುಲೈ 17 ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಕಟಗೊಳ್ಳಲಿದೆ. ಸರ್ಕಾರದ ಆಹ್ವಾನದ ಮೇರೆಗೆ ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ನೀರ್ ಆಸೀಫ್ ನವದೆಹಲಿಗೆ ತೆರಳಿದ್ದಾರೆ. ಮೈಸೂರು ಮತ್ತೊಮ್ಮೆ ದೇಶದಾದ್ಯಂತ ಹೆಸರು ಗಳಿಸುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಈ ಬಗ್ಗೆ ಮಾತಾನಾಡಿರುವ ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ನೀರ್ ಆಸೀಫ್, ನಿಮ್ಮ ಸ್ಥಳೀಯ ಸಂಸ್ಥೆಯು ಪ್ರಶಸ್ತಿ ಪಟ್ಟಿಯಲ್ಲಿ ಟಾಪ್‌ನಲ್ಲಿದೆ ಮತ್ತು ಸ್ವಚ್ಛ ಲೀಗ್‌ನಲ್ಲಿ ಸೇರಿಸಿದ್ದಾರೆ ಬನ್ನಿ ಎಂದು ಆಹ್ವಾನಿಸಿದ್ದಾರೆ ಹಾಗೂ ಯಾವ್ಯಾವ ನಗರಗಳು ಟಾಪ್ 3 ನಲ್ಲಿ ಇರಲಿವೆ ಎಂಬುದು ನಾಳೆ ತಿಳಿದುಬರಲಿದೆ. 3ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಪ್ರಶಸ್ತಿಯ ಆಶಾಭಾವದಲ್ಲಿದ್ದೇನೆ. ನಗರ ಜನರಿಗೆ ಖುಷಿಯ ಸುದ್ದಿ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಮೊದಲ ಸ್ವಚ್ಛ ಸರ್ವೇಕ್ಷಣೆಯನ್ನು 2016ರಲ್ಲಿ ನಡೆಸಲಾಯಿತು. ಆಗ 73 ನಗರಗಳನ್ನು ಮೌಲ್ಯಮಾಪನ ಮಾಡಲಾಯಿತು. ಆಗ, ಮೈಸೂರು ದೇಶದಲ್ಲಿಯೇ ಮೊದಲನೇ ಸ್ಥಾನ ಪಡೆದಿತ್ತು. ನಂತರದ ವರ್ಷಗಳಲ್ಲಿ ಸಮೀಕ್ಷೆಗೆ ಒಳಗಾಗುವ ನಗರ ಸ್ಥಳೀಯ ಸಂಸ್ಥೆಗಳ ಸಂಖ್ಯೆ ಹೆಚ್ಚಾಯಿತು. 2023ರಲ್ಲಿ 4,477 ನಗರಗಳನ್ನು ಮೌಲ್ಯಮಾಪನ ಮಾಡಲಾಗಿತ್ತು. ಆಗ, ಮೈಸೂರಿನ ಸ್ಥಾನ ಕುಸಿದಿತ್ತು.
ಸ್ವಚ್ಛ ನಗರಿ ಎಂಬ ಪಟ್ಟವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯಿಂದ ಈ ಬಾರಿಯೂ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಅದಕ್ಕೆ ಪೌರಕಾರ್ಮಿಕರು ಶ್ರಮಿಸಿದ್ದಾರೆ. ಕಸವನ್ನು ವಿಂಗಡಿಸಿ ಕೊಡುವ ಮೂಲಕ ಜನರೂ ಸಹಕಾರ ನೀಡಿದ್ದಾರೆ. ಇದೆಲ್ಲದರ ಫಲ ದೊರೆಯುವ ಲಕ್ಷಣ ಗೋಚರಿಸುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




