ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಭಾರತ ಕ್ರಿಕೆಟ್ ಮಂಡಳಿಗೆ ಕ್ಷಮೆಯಾಚಿಸಿದ್ದಾರೆ. ಏಷ್ಯಾಕಪ್ ಫೈನಲ್ ಬಳಿಕ ಏನು ನಡೆಯಬಾರದಿತ್ತೋ, ಅದು ನಡೆದು ಹೋಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ನಖ್ವಿ ತಿಳಿಸಿದ್ದಾರೆ. ಬಳಿಕ ಏಷ್ಯಾ ಕಪ್ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ.
ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಪಂದ್ಯಾನಂತರ ನಾಯಕ ಸೂರ್ಯಕುಮಾರ್ ಯಾದವ್, ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದರು. ಕಾರಣ, ನಖ್ವಿ ಪಾಕಿಸ್ತಾನ ಸರ್ಕಾರದ ಸಚಿವರಾಗಿರುವುದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ACC ಮುಖ್ಯಸ್ಥರಾಗಿರುವುದು. ಇದರಿಂದಾಗಿ ಟ್ರೋಫಿ ಇಲ್ಲದೆ ತಂಡ ಭಾರತ ಸಂಭ್ರಮಿಸಬೇಕಾಯಿತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ನಡೆಗೆ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿತ್ತು. ಸೆಪ್ಟೆಂಬರ್ 30 ರಂದು ದುಬೈನಲ್ಲಿ ನಡೆದ ಎಸಿಸಿ ಸಭೆಯಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದ ಬಿಸಿಸಿಐ ಪ್ರತಿನಿಧಿಗಳು, ಕೌನ್ಸಿಲ್ನ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮೊಹ್ಸಿನ್ ನಖ್ವಿ ಕ್ಷಮೆಯಾಚಿಸಿದ್ದಾರೆ ಮತ್ತು ಟ್ರೋಫಿ ಹಸ್ತಾಂತರಿಸಲು ಭಾರತಕ್ಕೆ ಮುಂದೆ ಬರದೆ, ಯುಎಇ ಕ್ರಿಕೆಟ್ ಮಂಡಳಿಗೆ ಒಪ್ಪಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ