ಬೆಳ್ಳಂಬೆಳಿಗ್ಗೆ ಟ್ರಬಲ್ ಶೂಟರ್ ಡಿಕೆಶಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು. ಡಿಕೆಶಿ ಮತ್ತು ಡಿಕೆ ಸುರೇಶ್‌ಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಮೇಲೆ ರೇಡ್ ನಡೆಸಿದ್ದ ಸಿಬಿಐ ಹಲವು ದಾಖಲೆಗಳನ್ನ ಕಲೆ ಹಾಕಿದೆ. ಸಂಜೆ ವೇಳೆಗೆ ರೇಡ್ ಮುಗಿದಿದ್ದು, ದಾಳಿ ಬಳಿಕ, ಡಿಕೆ ಬ್ರದರ್ಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಇಡೀ ದೇಶದ ಉದ್ದಗಲಕ್ಕೂ ಎಲ್ಲ ಮುಖಂಡರುಗಳು ಶಿವಕುಮಾರ್‌ಗೆ ಹೀಗಾಗ್ಬಾರ್ದಿತು ಹೇಳಿ, ಹಲವು ಸಂಘಟನೆ, ಪಕ್ಷಗಳು ಪ್ರತಿಭಟನೆ ಮಾಡಿದ್ದು, ಕಾಲ್ನಡಿಗೆಯಿಂದ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಾವು ಅವರಿಗೆ ಪ್ರತಿಭಟನೆ ಮಾಡಿ, ಹೋರಾಟ ಮಾಡಿ ಎಂದಿಲ್ಲ. ಅವರಾಗಿಯೇ ನಮ್ಮ ಮೇಲೆ ಪ್ರೀತಿ, ಅಭಿಮಾನದಿಂದ ಹೀಗೆ ಮಾಡಿದ್ದಾರೆ. ಡಿಕೆಶಿ ಬೆಂಬಲಿಗರು ಶಾಂತಿ ಪ್ರಿಯರು ಎಂಬ ಸಂದೇಶವನ್ನ ಇಡೀ ದೇಶಕ್ಕೆ ನೀಡಿದ್ದಾರೆ. ಇದನ್ನು ಮರೆಯಲು ಸಾಧ್ಯವೇ.? ಎಂದು ಪ್ರಶ್ನಿಸಿದ್ದಾರೆ.
ನಾನು ತಿಹಾರ್ ಜೈಲಿಗೆ ಹೋದಾಗ ಹಲವರು ಹಲವು ಬಗೆಯಲ್ಲಿ ಮಾತನಾಡಿದರು. ಪರಪ್ಪನ ಅಗ್ರಹಾರದಿಂದ ಬಂದವರು ನನ್ನ ಬಗ್ಗೆ ಮಾತನಾಡಿದ್ದಾರೆ. ನಾನು ವಿಕ್ಟರಿ ಸಿಂಬಲ್ ತೋರಿಸಿ ಬಂದಿಲ್ಲ. ಜನರಿಗೆ ಕೈ ಮುಗಿದು ಬಂದೆ. ನಾನು ಜೈಲುವಾಸ ಅನುಭವಿಸಿ ಬಂದ ಬಳಿಕ, ನಾನು ಕೇಳದಿದ್ದರೂ ನಮ್ಮ ಅಧ್ಯಕ್ಷೆ ಸೋನಿಯಾಗಾಂಧಿ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಜನ ನನ್ನನ್ನು ಬೆಂಬಲಿಸಿದ್ದಾರೆ ಎಂದು ಡಿಕೆಶಿ ಹೇಳಿದರು.
ಕೋವಿಡ್ ವೇಳೆ ಸಡೆನ್ ಆಗಿ ಲಾಕ್‌ಡೌನ್ ಮಾಡಿದರು. ಅದನ್ನ ಒಪ್ಪಿಕೊಂಡು ಸಹಕಾರ ಕೊಟ್ಟೆವು. ಅಂದು ನಡೆದಿದ್ದ ಅಕ್ರಮದ ಬಗ್ಗೆ ಹೋರಾಟ ಮಾಡಿದ್ದೆವು. ಸರ್ಕಾರದ ಅಕ್ರಮವನ್ನ ಬಯಲಿಗೆಳೆದಿದ್ದೆವು. ಅದನ್ನ ಮರೆಮಾಚಲು ಇದೆಲ್ಲ ನಡೆಯುತ್ತಿದೆ ಎಂದು ಡಿಕೆಶಿ ಕಿಡಿ ಕಾರಿದ್ದಾರೆ.
ಈ ಸಿಬಿಐ ದಾಳಿಗೆ ನಾನು ಹೆದರುವುದಿಲ್ಲ. ಕೇಸ್, ಎಫ್‌ಐಆರ್‌ಗೆಲ್ಲ ನಾನು ಹೆದರುವುದಿಲ್ಲ. ನಾನು ತಪ್ಪಿತಸ್ಥ ಎಂದು ಈವರೆಗೂ ಸಾಬೀತಾಗಿಲ್ಲ. ಇದರಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಇನ್ನು ಎಷ್ಟು ದಾಳಿ ಮಾಡುತ್ತಿರೋ ಮಾಡಿ. ಎಷ್ಟು ಶಿಕ್ಷೆ ಕೊಡ್ತಿರೋ ಕೊಡಿ. ನನ್ನ ಕಾಪಾಡಲು ಅಜ್ಜ ಇದ್ದಾರೆ, ಜನ ಇದ್ದಾರೆ, ಅವರ ಪ್ರೀತಿ ಇದೆ. ಅದೆಲ್ಲ ನನ್ನನ್ನು ಕಾಪಾಡುತ್ತದೆ. ಆದ್ದರಿಂದ ಇದರಿಂದೆಲ್ಲ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.