ಬಿಡದಿ ಸ್ಮಾರ್ಟ್ ಸಿಟಿ ಯೋಜನೆಯ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮ್ಮ ಅನಿರ್ದಿಷ್ಟಾವಧಿ ಹೋರಾಟವನ್ನು ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಈ ಹೋರಾಟಕ್ಕೆ ಈಗ ಜೆಡಿಎಸ್ ಬಲ ಸಿಕ್ಕಿದ್ದು, ಸೆಪ್ಟೆಂಬರ್ 28 ಅಂದ್ರೆ ಇದೇ ಭಾನುವಾರ ಜೆಡಿಎಸ್ ನಾಯಕರು ಹೋರಾಟಕ್ಕೆ ಧುಮುಕಲಿದ್ದಾರೆ.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಆರೋಗ್ಯದ ಕಾರಣದಿಂದಾಗಿ ಬರ್ತಿಲ್ಲ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಸ್ಮಾರ್ಟ್ ಸಿಟಿಗಾಗಿ ವಶಪಡಿಸಿಕೊಳ್ಳುತ್ತಿರುವ 10 ಹಳ್ಳಿಗಳಲ್ಲಿ, ಸುಮಾರು ಮೂರೂವರೆ ಸಾವಿರ ರೈತ ಕುಟುಂಬಗಳಿವೆ. 15ರಿಂದ 16 ಸಾವಿರದಷ್ಟು ಜನಸಂಖ್ಯೆ ಇದೆ. ಕೆಎಂಎಫ್‌ಗೆ ಪ್ರತಿ ತಿಂಗಳು 6 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಪೂರೈಕೆ ಮಾಡುತ್ತಿವೆ. ಇಲ್ಲಿನ ಜನರು ಪ್ರಮುಖವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ.
ಆದ್ರೆ, ಟೌನ್‌ಶಿಪ್ ಯೋಜನೆಯಿಂದಾಗಿ, ರೈತರ ಬದುಕು ಅತಂತ್ರ ಸ್ಥಿತಿಗೆ ದೂಡುವ ಆತಂಕವಿದೆ. ಹೀಗಾಗಿ ಯೋಜನೆ ಕೈಬಿಡುವಂತೆ ರೈತರೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಕುಮಾರಸ್ವಾಮಿ ಅವಧಿಯಲ್ಲಿ ಯೋಜನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೆ, ಭಾರೀ ವಿರೋಧ ಬಂದಿದ್ರಿಂದ ಶುರುವಾಗಲೇ ಇಲ್ಲ. ಇದೀಗ ಡಿಸಿಎಂ ಡಿಕೆಶಿ ಯೋಜನೆ ಶುರು ಮಾಡಲು, ಫಲವತ್ತಾದ ಭೂಮಿಯನ್ನೇ ವಶಪಡಿಸಿಕೊಳ್ಳಲು ಹೊರಟಿದ್ದು, ಬಿಡದಿ ರೈತರ ನಿದ್ದೆಗೆಡಿಸಿದೆ.
ಈ ಹೋರಾಟವನ್ನು ಜನತಾದಳ ಪಕ್ಷದಿಂದ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ. ದುರುದ್ದೇಶದಿಂದ ಜಮೀನು ಖರೀದಿ ಮಾಡಲಾಗ್ತಿದೆ ಎಂದು ಆರೋಪಿಸಲಾಗಿದೆ. ಈ ಹೋರಾಟದ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಡುವ ತನಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ರೈತರ ಪರ ನಿಲ್ಲುತ್ತದೆ. ಮೊದಲು ಜನರಲ್ಲಿ ವಿಶ್ವಾಸ ಮೂಡಿಸಿ. 3 ವರ್ಷದಲ್ಲಿ ಈ ಯೋಜನೆ ಸಂಪೂರ್ಣ ಮಾಡುವುದಕ್ಕೆ ಸಾಧ್ಯವಾಗುತ್ತಾ? ನಿಮ್ಮ ಬಳಿ ದುಡ್ಡು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿಯವರೆಗೆ ರೈತರ ಸಭೆ ಮಾಡಿದ್ದೀರಾ?. ರೈತರ ವಿರುದ್ಧ ಉಪಮುಖ್ಯಮಂತ್ರಿಗಳು ತೊಡೆ ತಟ್ಟಿ ಹೋಗ್ತಿರಾ?. ಇದೇನಾ ನೀವು ರೈತರಿಗೆ ತೋರಿಸುವ ಗೌರವ. ಇದಕ್ಕಾ ನೀವು ಡಿಸಿಎಂ ಸ್ಥಾನದಲ್ಲಿ ಕುಳಿತಿರೋದು ಅಂತಾ ವಾಗ್ದಾಳಿ ನಡೆಸಿದ್ದಾರೆ.