Davanagere: ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

Davanagere News: ದಾವಣಗೆರೆ ದಕ್ಷಿಣ ಅಭ್ಯರ್ಥಿ ಸಮರ್ಥ್ ಶಾಮನೂರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಈ ವೇಳೆ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪನವರು 6 ಬಾರಿ ಶಾಸಕರಾಗಿದ್ದು, ಅವರ ಮಗ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ರವರು 2 ಬಾರಿ ಶಾಸಕರಾಗಿ ಜನರಿಂದ ಆಯ್ಕೆಯಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ. ಶಾಮನೂರು ಶಿವಶಂಕರಪ್ಪ ನವರು ಮಂತ್ರಿ, ಸಂಸದರಾಗಿ, ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಜನಮನದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಮೃತಪಟ್ಟರೆ, ಅವರ ಕುಟುಂಬದವರಿಗೆ ಟಿಕೆಟ್ ನೀಡುವ ಪ್ರತೀತಿಯನ್ನು ಪಕ್ಷ ಬೆಳೆಸಿಕೊಂಡು ಬಂದಿದೆ. ಆದ್ದರಿಂದ ಸಮರ್ಥ ಶಾಮನೂರುರವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಿಲ್ಲ. ಪಕ್ಷದ ಕಾರ್ಯಕರ್ತರು ಸರ್ವಸಮ್ಮತವಾಗಿ ಆಯ್ಕೆ ಮಾಡುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಬಂಡಾಯ ಅಭ್ಯರ್ಥಿಯಾಗಿರುವ ಸಾದಿಕ್ ಪೈಲ್ವಾನ್ ರವರು ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಕಾಂಗ್ರೆಸ್ ವಿವಿಧ ಜಾತಿ, ಧರ್ಮ, ವರ್ಗಗಳ ಜನರನ್ನು ಒಳಗೊಂಡ ಪಕ್ಷ. ಮಹಿಳೆಯರು, ರೈತರು, ಹಿಂದೂಗಳು, ಅಲ್ಪಸಂಖ್ಯಾತರು, ಕಾರ್ಮಿಕರನ್ನು ಒಳಗೊಂಡ ಪಕ್ಷವಾಗಿದ್ದು, ಎಲ್ಲರನ್ನೊಳಗೊಂಡಿರುವ ಅಭಿವೃದ್ಧಿಯಲ್ಲಿ ನಂಬಿಕೆಯಿಟ್ಟಿರುವ ಪಕ್ಷ ನಮ್ಮದು. ನುಡಿದಂತೆ ನಡೆದು, ಜನರಿಗೆ ನೀಡಲಾದ ಭರವಸೆಗಳನ್ನು ಈಡೇರಿಸಿರುವವರು ನಾವು. ಕಳೆದ ಬಾರಿ ನೀಡಲಾಗಿದ್ದ ಎಲ್ಲ ಭರವಸೆಗಳನ್ನು ಮೂರು ವರ್ಷಗಳಲ್ಲಿ ಭಾಗಶ: ಪೂರೈಸಲಾಗಿದೆ. ಬಜೆಟನ್ನು ಅವಲೋಕಿಸಿದರೆ ನುಡಿದಂತೆ ನಡೆಯುವ ನಮ್ಮ ಮಾತನ್ನು ನಿರೂಪಿಸಲಾಗಿದೆ. ದಾವಣಗೆರೆ ಜಿಲ್ಲೆಯು ಗ್ಯಾರಂಟಿಗಳ ಜಾರಿಯಲ್ಲಿ ನಂ.1 ಆಗಿದೆ ಎಂದು ಸಿಎಂ ತಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಕಳೆದ ಉಪಚುನಾವಣೆಯಲ್ಲಿ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರಿನಲ್ಲಿಯೂ ದೊಡ್ಡ ಅಂತರದಿಂದ ಗೆಲುವು ಸಾಧಿಸಲಾಗಿದೆ. ಚನ್ನಪಟ್ಟಣ್ಲದಲ್ಲಿ 25 ಸಾವಿರ ಅಂತರದಿಂದ, ಸಂಡೂರಿನಲ್ಲಿ 9 ಸಾವಿರ, ಶಿಗ್ಗಾಂವಿಯಲ್ಲಿ 12 ಸಾವಿರ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ನ ಮೇಲೆ ಜನರ ವಿಶ್ವಾಸವಿದೆ. ನಮ್ಮ ಯೋಜನೆಗಳ ಮೇಲೆ ನಂಬಿಕೆಯಿರಿಸಿದ್ದಾರೆ. ಈಗಿನ ಎರಡೂ ಉಪಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಭರವಸೆಯಿದೆ. ಈ ಭಾಗದಲ್ಲಿ ನಾನು ಸಹ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೇನೆ.

ಈ ಹಿಂದೆಯೂ ಉಪಚುನಾವಣೆಗಳು ನಡೆದಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಗ ಶಿಗ್ಗಾಂವಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಅಂತೆಯೇ ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಲಿದ್ದು, ಈ ಗೆಲುವು 2028ರ ಕಾಂಗ್ರೆಸ್ ಗೆಲುವಿಗೆ ದಿಕ್ಸೂಚಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

About The Author