ಬೆಂಗಳೂರು : ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ಕುರಿತು ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ಹಲವಾರು ಚರ್ಚೆಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಫುಲ್ ಸ್ಟಾಪ್ ನೀಡಿದ್ದಾರೆ. ತಮ್ಮ ಎರಡು ದಿನಗಳ ದೆಹಲಿಯ ಭೇಟಿಯ ವೇಳೆಯೇ ಅವರು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹೈಕಮಾಂಡ್ ಸೇರಿದಂತೆ ಪವರ್ ಶೇರಿಂಗ್ ಚರ್ಚೆ ಮಾಡುತ್ತಿದ್ದ ಶಾಸಕರಿಗೂ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣೀಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.
ಇನ್ನೂ ರಾಷ್ಟ್ರ ರಾಜಧಾನಿಯಿಂದಲೇ ಸಿದ್ದರಾಮಯ್ಯ ಮಹತ್ವದ ಮೆಸೇಜ್ ನೀಡಿದ್ದರೂ ಇತ್ತ ಡಿಕೆ ಶಿವಕುಮಾರ್ ಫುಲ್ ಸೈಲೆಂಟ್ ಆಗಿದ್ದಾರೆ. ಸಿಎಂ ಸುದ್ದಿಗೋಷ್ಠಿ ನಡೆಸಿ ನಾಯಕತ್ವ ಬದಲಾವಣೆಯಿಲ್ಲ, ಐದು ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಇದನೆಲ್ಲ ಗಮನಿಸಿಯೂ ಡಿಕೆ ಶಿವಕುಮಾರ್ ಮಾತ್ರ ಮೌನಕ್ಕೆ ಶರಣಾಗಿರುವುದು ಮುಂದಿನ ನಡೆಗಳ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ಏನಿರಬಹುದು ಬಂಡೆಯ ಸೈಲೆಂಟ್ ಗೇಮ್?
1) ಸಿಎಂ ಪವರ್ ಗೇಮ್ ಗೆ ಡಿಸಿಎಂ ಡಿಕೆ ಸೈಲೆಂಟ್ ಅಸ್ತ್ರ
2) ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಡಿಸಿಎಂ
3) ತನ್ನಿಂದ ಯಾವುದೇ ಗೊಂದಲ ಆಗದಂತೆ ಎಚ್ಚರಿಕೆಯ ಹೆಜ್ಜೆ
4) ನವೆಂಬರ್ ವೇಳೆಗೆ ಹೈಕಮಾಂಡ್ ಕದ ತಟ್ಟೋಕೆ ಡಿಕೆ ಪ್ಲ್ಯಾನ್
5) ಮತ್ತೆ ಹೈಕಮಾಂಡ್ ಮನವೊಲಿಸಲು ಡಿಕೆ ಪ್ಲ್ಯಾನ್
6) ಪ್ರಿಯಾಂಕಾ ಗಾಂಧಿ ಮೂಲಕ ರಾಹುಲ್ ಮನವೊಲಿಕೆಗೆ ಯತ್ನ
7) ರಾಹುಲ್ ಗಾಂಧಿ ಮನವೊಲಿಸಲು ಡಿಸಿಎಂ ಡಿಕೆ ಪ್ರಯತ್ನ
8) ಮೊನ್ನೆಯಷ್ಟೇ ಪ್ರಿಯಾಂಕಾ ಭೇಟಿಯಾಗಿ ಮಾತುಕತೆ
9) ನಾಯಕತ್ವ ಸಮರದಲ್ಲಿ ಡಿಕೆ ಮುಂದಿನ ನಡೆ ತೀವ್ರ ಕುತೂಹಲ
ಪ್ರಮುಖವಾಗಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಪವರ್ ಗೇಮ್‌ಗೆ ತಮ್ಮದೇ ಆದ ಸೈಲೆಂಟ್ ಅಸ್ತ್ರ ಹೂಡಿದ್ದಾರೆ. ಏನೇನೂ ನಡೆಯುತ್ತದೆ, ನಡೆಯಲಿ ಎನ್ನುವ ಕಾದುವ ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಪಕ್ಷದಲ್ಲಿ ತನ್ನ ಬಗ್ಗೆ ಯಾವುದೇ ಪರಿಣಾಮ ಬೀರುವ ಅಭಿಪ್ರಾಯಗಳು ವ್ಯಕ್ತವಾಗದಂತೆ, ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದು ತಿಳಿದು ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸದ್ಯದ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಡಿಕೆಶಿ ವರ್ಷಾಂತ್ಯದ ನವೆಂಬರ್ ವೇಳೆಗೆ ಹೈಕಮಾಂಡ್ ಕದವನ್ನು ತಟ್ಟುವ ಯೋಚನೆಯಲ್ಲಿದ್ದಾರೆ. ಈ ತಂತ್ರಗಾರಿಕೆಯ ಮೂಲಕ ಮತ್ತೊಮ್ಮೆ ಹೈಕಮಾಂಡ್ ನಾಯಕರನ್ನು ಮನವೊಲಿಸಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ.
ಅಲ್ಲದೆ ಕೈ ಅಧಿನಾಯಕಿಯ ಜಾಗಕ್ಕೆ ಪ್ರಮೋಶನ್ ಪಡೆದಿರುವ ಪ್ರಿಯಾಂಕಾ ಗಾಂಧಿ ಮೂಲಕ ರಾಹುಲ್ ಗಾಂಧಿಯವರನ್ನು ಒಪ್ಪಿಸುವ ಯತ್ನಕ್ಕೆ ಕೈ ಹಾಕಲಿದ್ದಾರೆ. ಮುಖ್ಯವಾಗಿ ಇದರ ಮೊದಲ ಭಾಗವೆಂಬಂತೆ ಮೊನ್ನೆಯಷ್ಟೇ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಒಂದು ಹಂತದ ಮಾತುಕತೆ ಮುಗಿಸಿ ಬಂದಿದ್ದಾರೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ರಾಜ್ಯ ನಾಯಕತ್ವದ ಸಮರದಲ್ಲಿ ಡಿಸಿಎಂ ಅವರ ಮುಂದಿನ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೂ ತಮ್ಮ ದೆಹಲಿಯ ಭೇಟಿಯ ಬಳಿಕ ರಾಜ್ಯಕ್ಕೆ ವಾಪಸ್ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಯ ಭೇಟಿಯು ಬಹಳ ಯಶಸ್ವಿಯಾಗಿದೆ ಎಂದು ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಪಕ್ಷದವರು ಏನು ಹೇಳಿದ್ದಾರೆ ಎಂದು ಈಗಾಗಲೇ ಸಿಎಂ ಉಲ್ಲೇಖಿಸಿದ್ದಾರೆ. ಕೆಲವೇ ಶಾಸಕರ ಬೆಂಬಲದ ಬಗ್ಗೆ ಸಿಎಂ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನಾನು ಗಮನಿಸಿದ್ದೇನೆ. ಎಲ್ಲ ಪ್ರಶ್ನೆಗಳಿಗೆ ಸಿಎಂ ಉತ್ತರ ನೀಡಿದ್ದು, ಅವರು ಮಾತನಾಡಿದ ಬಳಿಕ ಪದೇ ಪದೇ ನಾನು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರ ಹಂಚಿಕೆಯ ಬಗ್ಗೆ ನಮಗ್ಯಾಕೆ ಗಾಬರಿಯಾಗಬೇಕು? ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ಸಾಕಷ್ಟು ಬೆಂಬಲಿಗರ ಆಸೆಯಾಗಿದೆ. ಎಲ್ಲರಿಗೂ ಆಸೆಗಳಿರುತ್ತವೆ, ಅವುಗಳ ಬಗ್ಗೆ ನಾನು ಸದ್ಯಕ್ಕೆ ಮಾತನಾಡುವುದಿಲ್ಲ. ಮಾತನಾಡುವವರೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಅವರೇ ಕೊಡುತ್ತಾರೆ ಎನ್ನುವ ಮೂಲಕ ಡಿಕೆ ಶಿವಕುಮಾರ್ ದೆಹಲಿ ಬೆಳವಣಿಗೆಗಳ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ. ಸದ್ಯಕ್ಕಂತೂ ಈ ಕುರ್ಚಿ ಕದನ ಇಲ್ಲಿಗೆ ಮುಗಿಯುವ ಹಂತಕ್ಕೆ ಕಂಡು ಬರುತ್ತಿಲ್ಲ. ಇದೀಗ ಎಲ್ಲರ ಚಿತ್ತ ಡಿಕೆ ಶಿವಕುಮಾರ್ ಅವರ ಮುಂದಿನ ನಡೆಯತ್ತ ನೆಟ್ಟಿದೆ. ಯಾವ ಕ್ಷಣದಲ್ಲಾದರೂ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದರೂ ಅಚ್ಚರಿ ಪಡುವಂತಿಲ್ಲ.