ಕರ್ನಾಟಕ ಟಿವಿ ಮಂಡ್ಯ : ಮಂಡ್ಯ ಜಿಲ್ಲೆಯ ರಾಜಕಾರಣ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತೆ.. ಮಂಡ್ಯ ಅಂದ್ರೆ ಇಂಡಿಯಾ ನೋಡುತ್ತೆ ಅನ್ನುವ ಮಾತಿದೆ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟು, ಮೈಷುಗರ್ ಫ್ಯಾಕ್ಟರಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ರೆ, ನವೋದಯ ವಿದ್ಯಾಲಯ, ವಿದ್ಯಾಪೀಠ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ವು.. ಇದೆಲ್ಲವೂ ಮಂಡ್ಯ ಹೆಸರನ್ನ ರಾಜ್ಯದಲ್ಲಿ ದೊಡ್ಡದಾಗಿ ಬಿಂಬಿಸಿದ್ವು.. ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಅವಧಿ ಮುಕ್ತಾಯದ ಹಂತದ ವರೆಗೆ ಮಂಡ್ಯದಲ್ಲಿ ಪ್ರಬುದ್ಧ ರಾಜಕಾರಣ ಮನೆಮಾತಾಗಿತ್ತು.. ರೈತ ಹೋರಾಟ ಉತ್ತುಂಗದಲ್ಲಿತ್ತು.. 2003ರ ನಂತರ ಮಂಡ್ಯ ಬರೀ ರಾಜಕಾರಣದ ಅಬ್ಬರಕ್ಕೆ ಕಾರಣವಾಗಿದೆ.. ಘಟಾನುಘಟಿ ರಾಜಕಾರಣಿಗಳು ಜಿಲ್ಲೆಗೆ ಬಂದು ಏನೇ ಭರವಸೆ ಕೊಟ್ಟರೂ ಬರೀ ಬಾಯಿಚಪಲಕ್ಕೆ ಅನ್ನುವಂತೆ ಆಗಿದೆ.. ಮೈಷುಗರ್ ಕಾರ್ಖಾನೆಯನ್ನ ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಇದೀಗ ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಮೈಷುಗರ್ ಸಹ ಖಾಸಗಿಯವರ ಪಾಲಾಗುವ ಸಾಧ್ಯತೆ ಇದೆ.. ಮಂಡ್ಯ ರೈತರು ಯಾವ ಪಕ್ಷದ ಮೇಲೂ, ಯಾವ ನಾಯಕರ ಮೇಲೂ ಇದೀಗ ನಂಬಿಕೆ ಉಳಿಸಿಕೊಂಡಿಲ್ಲ.. ಯಾಕಂದ್ರೆ ಯಾರೂ ಮಂಡ್ಯ ಜಿಲ್ಲೆಯ ರೈತರ ನೆರವಿಗೆ ಬಂದಿಲ್ಲ.. ಬರೀ ಭಾಷಣ ಮಾಡಿ ಮಂಡ್ಯ ಜನರನ್ನ ಯಾಮಾರಿಸಿದ್ದಾರೆ..

ಇದೀಗ ಡಿಸಿಎಂ ಅಶ್ವಥ್ ನಾರಾಯಣ್ ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಸಕ್ಕರೆ, ಕಾರ್ಖಾನೆ ಹಾಗೂ ವಿವಿ ಉದ್ದಾರ ಮಾಡುವ ಮಾತನಾಡಿದ್ದಾರೆ. ಇದಿಷ್ಟೇ ಅಲ್ಲದೇ ಪಾಳುಬಿದ್ದಿರುವ ವಿದ್ಯಾಪೀಠಕ್ಕೆ ನವಚೈತನ್ಯ ತುಂಬಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುವ ಮಾತನಾಡಿದ್ದಾರೆ.. ಅಷ್ಟಕ್ಕೂ ವಿದ್ಯಾಪೀಠದ ಇತಿಹಾಸದ ಬಗ್ಗೆ ಡಿಸಿಎಂ ಡಾ ಅಶ್ವಥ್ ನಾರಾಯಣ್ ವಿವರವಾಗಿ ಬರೆದಿದ್ದಾರೆ. ನೀವೇ ಓದಿ.
“108 ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ಸರ್ ಎಂ. ವಿಶ್ವೇಶ್ವರಯ್ಯನವರು ಮಂಡ್ಯದ ಶಿವಾರಗುಡ್ಡದಲ್ಲಿ ಸ್ಥಾಪಿಸಿದ್ದ ಶಿಕ್ಷಣ ಮತ್ತು ಕೌಶಾಲ್ಯಾಭಿವೃದ್ಧಿ ಸಂಸ್ಥೆಗೆ ಭೇಟಿ ನೀಡಿದೆ. ಕನ್ನಡನಾಡು ಮಾತ್ರವಲ್ಲದೆ ದೇಶಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿಯ ಮಹತ್ವವನ್ನು ಸಾರಿ ಹೇಳಿದ್ದ ಮಹಾನ್ ವ್ಯಕ್ತಿಯ ಕನಸು ದಿವ್ಯನಿರ್ಲಕ್ಷ್ಯದಿಂದ ಪಾಳುಬಿದ್ದಿದೆ.
1962ರಲ್ಲಿ ಡೆನ್ಮಾರ್ಕ್ ದೇಶದ ಪ್ರಧಾನಮಂತ್ರಿ ಜೇನ್ಸ್ ಓಟೋ ಕ್ರಾಗ್ ಅವರು ಇಲ್ಲಿಗೆ ಭೇಟಿ ನೀಡಿ ಸರ್.ಎಂವಿ ಅವರ ದೂರದೃಷ್ಟಿಯನ್ನು ಕೊಂಡಾಡಿದ್ದರು. ಇಂತಹ ಸಂಸ್ಥೆಯನ್ನು ನಮ್ಮ ಸರಕಾರ ಪುನರುಜ್ಜೀವನಗೊಳಿಸಿ ಆ ಮಹಾಚೇತನಕ್ಕೆ ಗೌರವ ಸಲ್ಲಿಸಲಿದೆ.
48 ಎಕರೆ ವಿಶಾಲ ಪ್ರದೇಶದಲ್ಲಿರುವ ಶಿಕ್ಷಣ ಮತ್ತು ಕೌಶಾಲ್ಯಾಭಿವೃದ್ಧಿ ಸಂಸ್ಥೆಯನ್ನು ಸರ್ವರೀತಿಯಲ್ಲೂ ಅಭಿವೃದ್ಧಿಗೊಳಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದ ಉತ್ಕೃಷ್ಟ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ ಕೇಂದ್ರವನ್ನಾಗಿ ರೂಪಿಸಲಾಗುವುದು.

ಸಮಗ್ರ ಯೋಜನಾ ವರದಿ ಪಡೆದ ನಂತರ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗುವುದು. ಹಳೆಯ ಮೈಸೂರು ಭಾಗದ ಯುವಜನತೆಯ ಕೌಶಲ್ಯ ತರಬೇತಿಗಾಗಿ ಇದು ಹೊಸ ವೇದಿಕೆಯಾಗಿ ಹೊರಹೊಮ್ಮಲಿದೆ.
ಡಾ .ಅಶ್ವಥ್ ನಾರಾಯಣ್, ಡಿಸಿಎಂ

ನೋಡಿದ್ರಲ್ಲ, ವಿದ್ಯಾಪೀಠದ ಇತಿಹಾಸವನ್ನ.. ಇಂಥಹ ಹಿನ್ನೆಲೆ ಇರುವ ವಿದ್ಯಾಪೀಠ ಮಂಡ್ಯ ಹೆಸರಿನಲ್ಲಿ ರಾಜಕಾರಣ ಮಾಡುವವರ ನಿರ್ಲಕ್ಷ್ಯಕ್ಕೆ ಬಲಿಯಾಗಿತ್ತು.. ಈ ಜಾಗಕ್ಕೆ ಒಬ್ಬ ಜನಪ್ರತಿನಿಧಿ ಭೇಟಿ ನೀಡಿ ಸುಮಾರು 30 ವರ್ಷಗಳೇ ಕಳೆದಿರಬಹುದು.. ಇದೀಗ ಈ ಜಾಗಕ್ಕೆ ಡಿಸಿಎಂ ಭೇಟಿ ಮಂಡ್ಯದ ಯುವಜನತೆಯ ನಿರೀಕ್ಷೆ ಹೆಚ್ಚಿಸಿದ್ದಾರೆ. ಡಾ ಅಶ್ವಥ್ ನಾರಾಯಣ್ ನುಡಿದಂತೆ ನಡೆದ್ರೆ ಮಂಡ್ಯ ಯುವಜನತೆ ಪಾಲಿಗೆ ನಂಬಿಕಸ್ಥ ನಾಯಕನನಾಗಬಹುದು.. ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಇಷ್ಷಟುದ್ದು ಬರೆದಿದ್ರೆ ಕಂಡಿತ.. ೀ ಹಿಂದೆ ಮಂಡ್ಯ ಜನಕ್ಕೆ ವಂಚಿಸಿದ ರಾಜಕಾರಣಿಗಳ ಸಾಲಿಗೆ ಸೇರಿಕೊಳ್ತಾರೆ. ಈ ವಿದ್ಯಾಪೀಠ ಡಿಸಿಎಂ ಹೆಳಿದಂತೆ ಅಂತರಾಷ್ಟ್ರೈ ಮಟ್ಟದ ಕೌಶಾಲ್ಯಾಭಿವೃದ್ಧಿ ತಾಣವಾಗಲಿ, ನಮ್ಮ ಹಳೇ ಮೈಸೂರು ಭಾಗದ ಯುವಜನತೆಯ ಭವಿಷ್ಯಕ್ಕೆ ಬೆಳಕಾಗಲಿ. ಇದು ಕರ್ನಾಟಕ ಟಿವಿ ಆಶಯ.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ.