Hubli News: ಹುಬ್ಬಳ್ಳಿ: ಸಾವಿನ ಹೆದ್ದಾರಿ ಅದೆಷ್ಟೋ ಜೀವಗಳ ಬಲಿ ಪಡೆದಿರುವುದು ಮಾತ್ರವಲ್ಲದೆ, ವಾಹನ ಸವಾರರಿಗೆ ಭಯ ಹುಟ್ಟಿಸುವ ಭಯಾನಕ ರಸ್ತೆಯಾಗಿದೆ. ಸಾವಿನ ಹೆದ್ದಾರಿ ಖ್ಯಾತಿಯ ರಸ್ತೆಯ ಕಾಮಗಾರಿ ಮಾತ್ರ ವಿಳಂಬವಾಗುತ್ತಿದ್ದು, ಯಾವಾಗ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗುತ್ತದೆಯೋ..? ಎಂದು ಎದುರು ನೋಡುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ನೀಡಿದ ಗಡುವು ಮುಕ್ತಾಯಕ್ಕೆ ಒಂದೇ ತಿಂಗಳು ಬಾಕಿ ಉಳಿದಿದೆ. ಈ ಮಧ್ಯೆ ಕೆಲವೆಡೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿಲ್ಲ. ಕೆಳ ಸೇತುವೆ ನಿರ್ಮಾಣ, ಗುಡ್ಡ ಕೊರೆಯುವುದು ಸೇರಿದಂತೆ ಅನೇಕ ಕಾಮಗಾರಿ ಬಾಕಿ ಉಳಿದಿವೆ. ಇವೆಲ್ಲವನ್ನು ಗಮನಿಸಿದರೆ, ತಿಂಗಳಲ್ಲ, ಇನ್ನೂ ವರ್ಷವಾದರೂ ಕಾಮಗಾರಿ ಮುಗಿಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಹೌದು..ಬೈಪಾಸ್ ಕಾಮಗಾರಿಗೆ ರಸ್ತೆ ನಿಗದಿಪಡಿಸಿದ ಅವಧಿ 2025ರ ಸೆಪ್ಟೆಂಬರ್‌ಗೆ ಪೂರ್ಣಗೊಳ್ಳಲಿದೆ. ಆದರೆ, ಕಾಮಗಾರಿ ಆರಂಭಿಸುವ ಸಂದರ್ಭದಲ್ಲಿ ಅಧಿಕಾರಿಗಳು 2025 ಜೂನ್ ತಿಂಗಳಿಗೆ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಬೈಪಾಸ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದರಿಂದ ಸಾಕಷ್ಟು ಕಾಮಗಾರಿ ಬಾಕಿ ಉಳಿದುಕೊಳ್ಳುವಂತಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಏನಂತಾರೇ ನೋಡಿ..
ಇನ್ನೂ ಕಾಮಗಾರಿ ವಿಳಂಬ ಪ್ರಶ್ನಿಸಿದರೆ, ಮಳೆ ತೊಡಕು, ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿದೆ ಎಂದು ಸಬೂಬು ನೀಡಲಾಗುತ್ತಿದೆಯೇ ಹೊರತು ಕಾಮಗಾರಿಗೆ ವೇಗ ನೀಡುವ ಕೆಲಸ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಅಲ್ಲದೇ ಬಹುತೇಕ ಕಡೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ಇನ್ನಾದರೂ ಕಾಮಗಾರಿ ಚುರುಕುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡುವ ಕಾರ್ಯ ಮಾಡಬೇಕಿದೆ.
ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ