ಶೂಟರ್ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್, ಭಾರತ ಹಾಕಿ ಪುರುಷರ ತಂಡ ನಾಯಕ ಹಮ್ರನ್‌ಪ್ರೀತ್ ಸಿಂಗ್, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರಿಗೆ ಗುರುವಾರ ಭಾರತ ಸರ್ಕಾರವು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.
ಗುರುವಾರ ಸಚಿವಾಲಯ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿತು. ಒಲಿಂಪಿಕ್ಸ್‌ನ ಕಂಚು ವಿಜೇತ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಪ್ಯಾರಾಲಿಂಪಿಕ್ಸ್‌ನ ಹೈ ಜಂಪ್ ಚಾಂಪಿಯನ್ ಪ್ರವೀಣ್ ಕುಮಾರ್ ಕೂಡಾ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ₹25 ಲಕ್ಷ ನಗದು ಬಹುಮಾನ ಹೊಂದಿದೆ.
22 ವರ್ಷದ ಮನು ಭಾಕರ್ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಬರೆದಿದ್ದರು. 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಕಂಚು ಜಯಿಸಿದ್ದರು.
ಇದೇ ಒಲಿಂಪಿಕ್ಸ್‌ನಲ್ಲಿ ಹಮ್ರನ್‌ಪ್ರೀತ್ ಸಿಂಗ್ ನೇತೃತ್ವದ ಭಾರತದ ಹಾಕಿ ಪುರುಷರ ತಂಡವು ಕಂಚಿನ ಸಾಧನೆ ಮಾಡಿತ್ತು. 18 ವರ್ಷದ ಗುಕೇಶ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದರು. ಮಂಡಿ ಕೆಳಗಿನ ಕಾಲು ಕಳೆದುಕೊಂಡಿರುವ ಹೈ ಜಂಪ್ ಪಟು ಪ್ರವೀಣ್, ಪ್ಯಾರಾ ಒಲಿಂಪಿಕ್ಸ್‌ನಲ್ಲಿ T64 ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಇನ್ನು ಕ್ರೀಡಾ ಸಚಿವಾಲಯ 17 ಮಂದಿ ಪ್ಯಾರಾ ಅಥ್ಲೀಟ್‌ಗಳು ಸೇರಿ 32 ಮಂದಿಗೆ ಅರ್ಜುನ ಪ್ರಶಸ್ತಿಯನ್ನೂ ಘೋಷಿಸಿದೆ. ಒಲಿಂಪಿಕ್ಸ್ ಪದಕ ಸಾಧಕರಾದ ಅಮನ್ ಶೆರಾವತ್, ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್, ಹಾಕಿ ತಂಡದ ಆಟಗಾರರಾದ ಜರ್ಮನ್‌ಪ್ರೀತ್ ಸಿಂಗ್, ಸುಖ್‌ಜೀತ್ ಸಿಂಗ್, ಸಂಜಯ್, ಅಭಿಷೇಕ್‌ಗೆ ಪ್ರಶಸ್ತಿ ಒಲಿದಿದೆ.
ಓಟಗಾರ್ತಿ ಜ್ಯೋತಿ ಯರ್ರಾಜಿ, ಜಾವೆಲಿನ್ ತಾರೆ ಅನ್ನು ರಾಣಿ, ಈಜುಪಟು ಸಾಜನ್ ಪ್ರಕಾಶ್, ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಧರಂಭೀರ್, ನವ್‌ದೀಪ್ ಸಿಂಗ್, ನಿತೇಶ್ ಕುಮಾರ್, ರಾಕೇಶ್ ಕುಮಾರ್, ಮೋನಾ ಅಗರ್‌ವಾಲ್, ರುಬಿನ ಫ್ರಾನ್ಸಿಸ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೀವಮಾನ ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಪಟ್ಟಿಯನ್ನೂ ಸಚಿವಾಲಯ ಪ್ರಕಟಿಸಿದೆ.
ಜ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.