ಶೃಂಗೇರಿ ಶಾರಾದಾ ಪೀಠಕ್ಕೆ ಸಂಬಂಧಿಸಿದ ಶ್ರೀ ಶಾರಾದಾ ಇನ್‌ಸ್ಟಿಟ್ಯೂಟ್‌ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸೋಮವಾರ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಚೈತನ್ಯಾನಂದ ಅವರ ಮನವಿಯ ಮೇರೆಗೆ ವಿಚಾರಣೆ ನಡೆದ ವೇಳೆ, ಈ ಮಾಹಿತಿಯನ್ನು ಪೊಲೀಸರು ಸಲ್ಲಿಸಿದ ಉತ್ತರದಲ್ಲಿ ತಿಳಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಚೈತನ್ಯಾನಂದ ಅವರು ಜೈಲಿನಲ್ಲಿ ಖಾವಿ ಧರಿಸಲು ಮತ್ತು ಧಾರ್ಮಿಕ ಗ್ರಂಥಗಳನ್ನು ಓದಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶ ಅನಿಮೇಶ್ ಕುಮಾರ್ ಅವರು ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡರು.
ವಿಚಾರಣೆಯ ವೇಳೆ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರು, ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ ಹಾಗೂ ಅವರಿಗೆ ಜೈಲಿನಲ್ಲಿ ಖಾವಿ ಧರಿಸಲು ಅನುಮತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದು ವಾದಿಸಿದರು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಚೈತನ್ಯಾನಂದ ಅವರ ಪರ ವಕೀಲ ಮನೀಶ್ ಗಾಂಧಿ ಅವರು, ಜೈಲಿನಲ್ಲಿ ಆಯ್ಕೆಯ ಬಟ್ಟೆ ಧರಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ವಾದಿಸಿದರು.
ಅವರು ಪಾರ್ಥಸಾರಥಿ ಎಂಬ ಹೆಸರಿನ ವ್ಯಕ್ತಿ ಸನ್ಯಾಸ ದೀಕ್ಷೆ ಪಡೆದ ನಂತರ ಚೈತನ್ಯಾನಂದ ಸರಸ್ವತಿ ಎಂದು ಹೆಸರು ಬದಲಾಯಿಸಿಕೊಂಡಿದ್ದು, ಈ ವಿಷಯವನ್ನು ಮಠವೂ ಪ್ರಶ್ನಿಸಿಲ್ಲ ಎಂದು ತಿಳಿಸಿದರು. ದೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಗಾಂಧಿ ಸಮಯ ಕೋರಿದ್ದು, ನ್ಯಾಯಾಲಯವು ಅದಕ್ಕೆ ಅನುಮತಿ ನೀಡಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ