ಕೆ.ಎನ್. ರಾಜಣ್ಣರನ್ನ ಸಚಿವ ಸಂಪುಟದಿಂದ ವಜಾಗೊಳಿಸಿದಕ್ಕೆ, ವಾಲ್ಮೀಕಿ ಸಮುದಾಯದ ನಾಯಕರು ರೊಚ್ಚಿಗೆದ್ದಿದ್ದಾರೆ. ಈ ಹಿಂದೆ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರ, ರಾಜೀನಾಮೆ ಪಡೆದುಕೊಳ್ಳಲಾಗಿತ್ತು. ಅವರೂ ಎಸ್‌ಟಿ ಸಮುದಾಯಕ್ಕೆ ಸೇರಿದವರು. ಈಗ ಮತ ಕಳ್ಳತನ ವಿಚಾರವಾಗಿ ಹೇಳಿಕೆ ನೀಡಿದ್ದಕ್ಕೆ, ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ರಾಜಣ್ಣ ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಈ ನಿಟ್ಟಿನಲ್ಲಿ ಸಮುದಾಯದ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ವಿಧಾನಸೌಧದಲ್ಲಿ ವಾಲ್ಮೀಕಿ ಮುಖಂಡರು ಸಿಎಂ ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸಿದ್ದಾರೆ. ಸಿಎಂ ಜೊತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದು, ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ಸತೀಶ್ ಜಾರಕಿಹೊಳಿ, ರಾಜಾ ವೇಣುಗೋಪಾಲ್ ನಾಯ್ಕ್, ದೇವೇಂದ್ರಪ್ಪ ಜೊತೆಗೆ ಚಳ್ಳಕೆರೆ ರಘುಮೂರ್ತಿ, ಬಸವರಾಜ ದದ್ದಲ್, ಕೂಡ್ಲಿಗಿ ಶ್ರೀನಿವಾಸ್, ಬಸನಗೌಡ ತುರ್ವಿಹಾಳ್, ರಾಜೇಂದ್ರ, ಅನಿಲ್ ಚಿಕ್ಕಮಾದು ನಿಯೋಗ ಭೇಟಿಯಾಗಿದೆ.
ತೆರವಾಗಿರುವ ಎರಡೂ ಸಚಿವ ಸ್ಥಾನ ವಾಲ್ಮೀಕಿ ಸಮುದಾಯದ್ದು. ಹೀಗಾಗಿ ಸಂಪುಟ ಪುನಾರಚನೆ ವೇಳೆ, ಎರಡೂ ಸ್ಥಾನಗಳನ್ನು ವಾಲ್ಮೀಕಿ ಸಮುದಾಯಕ್ಕೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ. ರಾಜಣ್ಣ ಅವರನ್ನು ವಜಾಗೊಳಿಸಿದ್ದಕ್ಕೆ ಆಂತರ್ಯದಲ್ಲೇ ಸಿದ್ದು ಅಸಮಾಧಾನರಾಗಿದ್ದಾರೆ. ಆದರೆ ಹೈಕಮಾಂಡ್ ಸೂಚನೆ ಆಗಿರೋದ್ರಿಂದ, ಬಹಿರಂಗ ಹೇಳಿಕೆ ಕೊಡಲು ಹಿಂಜರಿಯುತ್ತಿದ್ದಾರೆ.