Haveri News: ರಾಣೇಬೆನ್ನೂರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಮೆಕ್ಕೆಜೋಳ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ತೆನೆ ಕಟ್ಟದೇ ಹಾಳಾಗಿವೆ. ಕೂಡಲೇ ರಾಣೇಬೆನ್ನೂರ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಒತ್ತಾಯಿಸಿದರು.
ಚಿಕ್ಕಹರಳಹಳ್ಳಿ, ಚೌಡಯ್ಯದಾನಪುರ, ಹೊಸ ಚಂದಾಪುರ, ಹಳೆ ಚಂದಾಪುರ, ಹೊನ್ನತ್ತಿ, ಕೆರಿಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ತೆರಳಿ ಬೆಳೆ ವೀಕ್ಷಣೆ ನಡೆಸಿದರು.
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದ್ದು, ಅಗತ್ಯ ಪ್ರಮಾಣದ ಮಳೆಯಿಲ್ಲದೆ ಮಳೆಆಶ್ರಿತ ಪ್ರದೇಶಗಳ ಬೆಳೆಗಳು ಹಾಳಾಗಿವೆ. ನೀರಾವರಿ ಇರುವ ಪ್ರದೇಶಗಳಲ್ಲಿ ಉತ್ತಮ ಬೆಳೆ ಕಂಡುಬಂದಿದ್ದು, ಮಳೆಆಶ್ರಿತ ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಪ್ಪರ್ ತುಂಗಾ ಕಾಲುವೆ ಮೂಲಕ ಹರಿಸುವ ನೀರು ಎಲ್ಲ ರೈತರ ಜಮೀನುಗಳಿಗೆ ತಲುಪಿಲ್ಲ. ಹೀಗಾಗಿ ಅಪ್ಪರ್ ತುಂಗಾ ನೀರು ಅವಲಂಬಿತ ಪ್ರದೇಶಗಳನ್ನು ಮಾತ್ರ ಆಧರಿಸಿ ಬರ ಪರಿಸ್ಥಿತಿ ನಿರ್ಧರಿಸಬಾರದು ಎಂದರು.
ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಮಳೆಆಶ್ರಿತ ಪ್ರದೇಶಗಳ ಬೆಳೆಹಾನಿ ಪರಿಶೀಲಿಸಿ, ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಬೆಳೆಹಾನಿಯಾದ ಪ್ರದೇಶಗಳಲ್ಲಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು. ಸರ್ವೆ ಪೂರ್ಣಗೊಂಡ ಬಳಿಕ ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಣೇಬೆನ್ನೂರ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡದಿದ್ದರೆ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಸಂತೋಷಕುಮಾರ ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
