ಬೆಂಗಳೂರು : ಮಂಗಳೂರಿನಲ್ಲಿ ನಡೆಯುತ್ತಿರುವ ಸಾಲು ಸಾಲು ಹತ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಗಂಭೀರವಾದ ನಿಲುವನ್ನು ತಾಳಿದ್ದು, ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ನಗರ ಪೊಲೀಸ್ ಆಯುಕ್ತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರಕ್ಕಾಗುವ ಮುಜುಗರದಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದೆ. ಇನ್ನೂ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಂಗಳೂರಿಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.
ಇನ್ನೂ ಈ ಎಲ್ಲದರ ನಡುವೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಮ್ಮಿಂದ ಎಲ್ಲಾ ಸಮಾಜಗಳ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ವತಿಯಿಂದ ಒಂದು ತಂಡ ಕಳುಹಿಸಿ ವರದಿ ನೀಡಲು ಹೇಳಿದ್ದೇವೆ. ಅಧಿಕಾರಿಗಳು ನೀಡುವ ವರದಿ ಬೇರೆ, ಸಾರ್ವಜನಿಕರ ಜತೆ ಚರ್ಚೆ ಮಾಡಿ ವರದಿ ನೀಡಲು ನಮ್ಮ ಪಕ್ಷದವರಿಗೆ ತಿಳಿಸಿದ್ದೇನೆ. ಕರಾವಳಿ ಭಾಗದಲ್ಲಿ ಶಾಂತಿ ನೆಲೆಸಬೇಕು. ಇದು ಒಂದು ಸಾವು, ಎರಡು ಸಾವಿನ ವಿಚಾರ ಮಾತ್ರವಲ್ಲ. ಇದು ಇಡೀ ಕರಾವಳಿ ಭಾಗಕ್ಕೆ ಬಿದ್ದಿರುವ ಕೊಡಲಿಪೆಟ್ಟು. ಜನರು ಆಂತಕಕ್ಕೆ ಒಳಗಾಗುವುದು, ಬಂಡವಾಳ ಹೂಡಿಕೆದಾರರು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿರುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಬಿಜೆಪಿ ಸ್ನೇಹಿತರು ಹಾಗೂ ಬೇರೆ ಬೇರೆ ಸಂಘಟನೆಗಳಿಗೆ ಮನವಿ ಮಾಡುತ್ತೇನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರದಿಂದ ಕರಾವಳಿಯ ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ. ಬಿಜೆಪಿಯವರು ಹಾಗೂ ಅನೇಕ ಸಂಘಟನೆಗಳು ಈ ಭಾಗದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡುತ್ತಿವೆ. ಇದರಿಂದ ನಷ್ಟ ಆಗುವುದು ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಅಲ್ಲಿರುವ ಪ್ರತಿಭಾವಂತ ಯುವಕರು ಈಗಾಗಲೇ ಉದ್ಯೋಗಕ್ಕಾಗಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ನಾವು ಉದ್ಯೋಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದ್ದಾರೆ.
ಅಧಿಕಾರಿಗಳು ಸ್ಥಳೀಯವಾಗಿ ಸ್ಪಂದಿಸುತ್ತಿಲ್ಲ ಎನ್ನುವ ವಿಚಾರವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಸ್ಪಂದಿಸುತ್ತಾರೆ. ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜೆಡಿಎಸ್ ಪಕ್ಷದವರು ಯಾಕೆ ಗಾಬರಿಯಾಗಬೇಕು? ಆ ಕಾರ್ಯಕರ್ತು ಒಂದೇ ಪಕ್ಷದವರು ಅಲ್ಲವಲ್ಲ. ಅವರು ಎರಡು ಪಕ್ಷ ಸೇರಿ ಒಟ್ಟಿಗೆ ಇದ್ದಾರಲ್ಲಾ? ಅವರು ಯಾರ ಜತೆ ಬೇಕಾದರೂ ಬೇರೆಯಬಹುದು. ಜನ, ಕಾರ್ಯಕರ್ತರು, ಮುಖಂಡರು ನಮ್ಮ ಜತೆ ಸೇರಲು ಆಸೆ ಪಡುತ್ತಿದ್ದಾರೆ. ಅವರನ್ನು ಬೇಡ ಎನ್ನಲು ಸಾಧ್ಯವೇ? ಎನ್ನುವ ಮೂಲಕ ಕಾರ್ಯಕರ್ತರ ಪಕ್ಷ ಸೇರ್ಪಡೆಯ ಕುರಿತು ಸಮರ್ಥನೆ ಮಾಡಿಕೊಂಡಿದ್ದಾರೆ.