Wednesday, February 5, 2025

Latest Posts

ವಿನ್ಯಾಸ ಸಂಬಂಧಿ ಕಲಿಕೆ: ಲಿವರ್ ಪೂಲ್ ವಿವಿ ಜತೆ ಐಎಸ್ಡಿಸಿ ಒಡಂಬಡಿಕೆ – ಸಚಿವ ಅಶ್ವತ್ಥನಾರಾಯಣ

- Advertisement -

ಬೆಂಗಳೂರು: ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಐಎಸ್ಡಿಸಿ) ಮತ್ತು ಯುನೈಟೆಡ್ ಕಿಂಗ್ಡಮ್ ನ ಪ್ರತಿಷ್ಠಿತ ಲಿವರ್ ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾಲಯ (ಎಲ್ ಜೆಎಂಯು)ಗಳು ವಿನ್ಯಾಸ ಸಂಬಂಧಿ ಕೋರ್ಸುಗಳ ಗುಣಮಟ್ಟದ ಕಲಿಕೆಯನ್ನು ಸಾಧ್ಯವಾಗಿಸುವ ಸಹಭಾಗಿತ್ವ ಒಡಂಬಡಿಕೆ ವಿನಿಮಯ ಮಾಡಿಕೊಂಡಿವೆ.

ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಗುರುವಾರ ಇಲ್ಲಿನ ಖಾಸಗಿ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಈ ಸಂಸ್ಥೆಗಳು ಒಪ್ಪಂದ ವಿನಿಮಯ ಮಾಡಿಕೊಂಡವು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಐಎಸ್ಡಿಸಿ ಮತ್ತು ಎಲ್ ಜೆಎಂಯು ನಡುವಿನ ಒಪ್ಪಂದದಿಂದಾಗಿ ವಿನ್ಯಾಸ ಮತ್ತು ಕಲೆಗಳಿಗೆ ಸಂಬಂಧಿಸಿದ ಅತ್ಯಾಧುನಿಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳ ಕಲಿಕೆ ಸಾಧ್ಯವಾಗಲಿದೆ’ ಎಂದರು.

ಈ ಸಹಭಾಗಿತ್ವದ ಅನ್ವಯ ಎಲ್ ಜೆಎಂಯು ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಬಂದು ಇಲ್ಲಿನ ಪ್ರತಿಷ್ಠಿತ ವಿ.ವಿ.ಗಳಲ್ಲಿ ಕಲಿಯಲಿದ್ದಾರೆ. ಅಲ್ಲಿನ ಇನ್ನೂ ಹಲವು ವಿ.ವಿ.ಗಳು ಭಾರತದೊಂದಿಗೆ ಕೈಜೋಡಿಸಲು ಉತ್ಸುಕವಾಗಿವೆ. ಇತ್ತೀಚೆಗೆ ಲಂಡನ್ನಿಗೆ ತೆರಳಿದ್ದಾಗ ಈ ನಿಟ್ಟಿನಲ್ಲಿ ಅಲ್ಲಿನ ಹಲವು ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಐಎಸ್ಡಿಸಿ ಕೇರಳದ ಕೊಚ್ಚಿನ್ ನಲ್ಲಿರುವ ಕ್ಯಾಂಪಸ್ಸಿನಲ್ಲಿ ಈ ಕೋರ್ಸುಗಳನ್ನು ವ್ಯವಸ್ಥೆ ಮಾಡಲಿದೆ ಎಂದು ಅವರು ತಿಳಿಸಿದರು.

ಎನ್ಇಪಿ ನೀತಿಯಲ್ಲಿ ಅಂತರ್ಶಿಸ್ತೀಯ ಸಂಶೋಧನೆ, ಉದ್ಯಮಗಳೊಂದಿಗೆ ಸಕ್ರಿಯ ಸಂಪರ್ಕ ಮತ್ತು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ಕೊಡಲಾಗಿದೆ. ಇಂತಹ ಒಡಂಬಡಿಕೆಗಳಿಂದ ಎರಡೂ ದೇಶಗಳ ಆರ್ಥಿಕ ಬೆಳವಣಿಗೆಗೆ ನೆರವು ಸಿಗಲಿದೆ ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಎಸ್ಡಿಸಿ ಮುಖ್ಯಸ್ಥ ಡಾ.ಟಾಮ್ ಜೋಸೆಫ್, ‘ಯುನೈಟೆಡ್ ಕಿಂಗ್ಡಮ್ ನ 20 ವಿದ್ಯಾರ್ಥಿಗಳು ಮುಂದಿನ ತಿಂಗಳು ರಾಜ್ಯಕ್ಕೆ ಬರಲಿದ್ದಾರೆ. ಇಲ್ಲಿ ಅವರು ವಿವಿಧ ವಿ.ವಿ.ಗಳಲ್ಲಿ ಒಂದು ತಿಂಗಳು ಇರಲಿದ್ದು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರ ಜತೆ ವಿಚಾರ ವಿನಿಮಯ ಕೈಗೊಳ್ಳಲಿದ್ದಾರೆ. ಜತೆಯಲ್ಲಿ ಸಾಂಸ್ಕೃತಿಕ ವಿನಿಮಯವೂ ನಡೆಯಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಲಿವರ್ಪೂಲ್ ವಿ.ವಿ.ಯ ಸಮಕುಲಾಧಿಪತಿ ಪ್ರೊ.ಜೋ ಯೇಟ್ಸ್ ಉಪಸ್ಥಿತರಿದ್ದರು.

 

- Advertisement -

Latest Posts

Don't Miss