Saturday, October 25, 2025

Latest Posts

ಇತಿಹಾಸ ಬರೆದ ಹಾಸನಾಂಬೆಯ ಭಕ್ತರು : ಹುಂಡಿಯಲ್ಲಿ ಬ್ಯಾನಾದ ನೋಟುಗಳು

- Advertisement -

ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ಜಾತ್ರಾ ಮಹೋತ್ಸವ ಈ ವರ್ಷ ಅದ್ದೂರಿಯಾಗಿ ನೆರವೇರಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಧನ್ಯರಾದರು. ಈ ಬಾರಿಯ ಜಾತ್ರೆ ಭಕ್ತಿ, ಭಾವನೆ ಮತ್ತು ಭವ್ಯತೆಯ ಜೊತೆಗೆ ಹೊಸ ಇತಿಹಾಸವನ್ನೇ ನಿರ್ಮಿಸಿದೆ.

ಭಕ್ತರಿಂದ ಟಿಕೆಟ್‌ ಮಾರಾಟ, ಲಾಡು ಪ್ರಸಾದ ವಿತರಣೆ ಹಾಗೂ ಕಾಣಿಕೆಗಳಿಂದಲೇ ದಾಖಲೆ ಆದಾಯ ಸಿಕ್ಕಿದ್ದ ಹಾಸನಾಂಬೆ ದೇವಸ್ಥಾನ ಈಗ ಹುಂಡಿ ಎಣಿಕೆಯಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಕೇವಲ 13 ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳು ಸಂಗ್ರಹವಾಗಿದ್ದು, ಈ ಬಾರಿ ಹುಂಡಿ ಎಣಿಕೆ ಕಾರ್ಯವನ್ನು ಹಾಸನ ಜಿಲ್ಲಾಧಿಕಾರಿ ಲತಾ ಹಾಗೂ ದೇವಸ್ಥಾನದ ಆಡಳಿತ ಅಧಿಕಾರಿ ಮಾರುತಿ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. ಹುಂಡಿಯಲ್ಲಿ ಒಟ್ಟು ₹3 ಕೋಟಿ 68 ಲಕ್ಷ 12 ಸಾವಿರ 275 ರೂ. ಕಾಣಿಕೆ ಸಂಗ್ರಹವಾಗಿದ್ದು, ಟಿಕೆಟ್‌, ಪ್ರಸಾದ ಮತ್ತು ಇತರೆ ಆದಾಯ ಸೇರಿ ಒಟ್ಟು 25 ಕೋಟಿ 59 ಲಕ್ಷ 87 ಸಾವಿರ 327 ರೂ. ಹಣ ದೇವಸ್ಥಾನದ ಖಾತೆಗೆ ಸೇರಿದೆ.

ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ದೇವಿಗೆ ಕಾಣಿಕೆಯಾಗಿ 75 ಗ್ರಾಂ 300 ಮಿಲಿ ಚಿನ್ನ ಹಾಗೂ 1 ಕೆ.ಜಿ 58 ಗ್ರಾಂ 400 ಮಿಲಿ ಬೆಳ್ಳಿ ವಸ್ತುಗಳನ್ನು ಅರ್ಪಿಸಿದ್ದಾರೆ. ಇದು ಹಾಸನಾಂಬೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಅತ್ಯಧಿಕ ಆದಾಯವಾಗಿ ದಾಖಲಾಗಿದ್ದು, ದೇಶದ ವಿವಿಧ ಭಾಗಗಳಷ್ಟೇ ಅಲ್ಲ, ವಿದೇಶಗಳಿಂದಲೂ ಭಕ್ತರು ಕಾಣಿಕೆ ಸಲ್ಲಿಸಿರುವುದು ವಿಶಿಷ್ಟವಾಗಿದೆ.

ಹುಂಡಿಯಲ್ಲಿ ಇಂಡೋನೇಷಿಯಾ, ನೇಪಾಳ, ಮಲೇಷಿಯಾ, ಯುಎಸ್‌ಎ, ಮಾಲ್ಡೀವ್ಸ್‌, ಕೆನಡಾ, ಕುವೈತ್‌, ಯುಎಇ ದೇಶಗಳ ಕರೆನ್ಸಿಗಳು ಸೇರಿ ಒಟ್ಟು 7,653 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ. ಜೊತೆಗೆ ಚಲಾವಣೆಯಿಂದ ಹೊರಗುಳಿದ ಹಳೆಯ ₹500 ಮತ್ತು ₹2000 ನೋಟುಗಳೂ ಕಂಡುಬಂದಿವೆ.
ಇದೇ ವೇಳೆ ಸಿದ್ದೇಶ್ವರಸ್ವಾಮಿ ದೇವಾಲಯದ ಪ್ರತ್ಯೇಕ ಹುಂಡಿ ಎಣಿಕೆ ಕಾರ್ಯದಲ್ಲಿ 15,17,785 ರೂ. ಕಾಣಿಕೆ ಸಂಗ್ರಹವಾಗಿದೆ. ಒಟ್ಟಾರೆ ಈ ಬಾರಿಯ ಹಾಸನಾಂಬೆ ಜಾತ್ರೆ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವುದಕ್ಕೆ ಕಾರಣವಾದರೆ, ದಾಖಲೆಮಟ್ಟದ ಕಾಣಿಕೆ ಸಂಗ್ರಹ ದೇವಿಯ ಪ್ರತಿ ವರ್ಷದ ಪ್ರಭಾವ ಮತ್ತು ಭಕ್ತರ ಅಪಾರ ನಂಬಿಕೆಯ ಸಾಕ್ಷಿಯಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss