ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (MDCC) ಚುನಾವಣೆಯ ಜಿದ್ದಾಜಿದ್ದಿ ಜೋರಾಗಿದೆ. ನವೆಂಬರ್ 2ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನವಾಗಿದೆ. ಜೆಡಿಎಸ್ ಹಾಗೂ NDA ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಶಾಸಕ ಡಾ.ಕೆ. ಅನ್ನದಾನಿ ಅವರ ನೇತೃತ್ವದಲ್ಲಿ NDA ಅಭ್ಯರ್ಥಿಗಳು ಮಂಡ್ಯ ಡಿಸಿಸಿ ಬ್ಯಾಂಕ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೂ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಹಕಾರ ಸಂಘದ ಸಂವಿಧಾನವನ್ನು ಕಾಂಗ್ರೆಸ್ ಸಂಪೂರ್ಣವಾಗಿ ತುಳಿದು, ಕಾನೂನನ್ನು ಗಾಳಿಗೆ ತೂರಿದೆ. ವಾಮ ಮಾರ್ಗದಿಂದ ಚುನಾವಣೆಯನ್ನು ನಡೆಸಲಾಗುತ್ತಿದೆ. ನರೇಂದ್ರ ಸ್ವಾಮಿಗೆ ಅಧಿಕಾರದ ಆಸೆ ಹೆಚ್ಚಾಗಿದೆ. ಸಹಕಾರ ಸಂಘದ ಚುನಾವಣೆ ಕಾಂಗ್ರೆಸ್ ನಾಯಕರ ಮನೆಯಲ್ಲಿ ತಯಾರಾಗುತ್ತಿದೆ ಎಂದು ಅನ್ನದಾನಿ ಆರೋಪ ಮಾಡಿದ್ದಾರೆ.
ಸರ್ಕಾರ ಬಂದ ದಿನದಿಂದಲೇ ಕಾಂಗ್ರೆಸ್ ಸಹಕಾರ ಸಂಘಗಳನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದೆ. ಅಧಿಕಾರದ ದಾಹದಿಂದ ನರೇಂದ್ರ ಸ್ವಾಮಿ ಹಾಗೂ ಕೆಲವು ಶಾಸಕರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ನೀಡಬೇಕಿತ್ತು. ಆದರೆ ಅದನ್ನೂ ಬಿಟ್ಟು ಕೊಡಲಿಲ್ಲ. ಅಧಿಕಾರಿಗಳು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ. ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಸಹಕಾರ ಇಲಾಖೆಯ ಮೇಲೆಯೇ ಸರ್ಕಾರದ ಪ್ರಭಾವ ಇದೆ ಎಂದು ಆರೋಪಿಸಿದರು.
ಮಳವಳ್ಳಿ ತಾಲ್ಲೂಕು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ NDA ಅಭ್ಯರ್ಥಿಗಳು ಬಲಿಷ್ಠ ಸ್ಪರ್ಧೆ ನೀಡಲಿದ್ದಾರೆ ಎಂದು ಡಾ. ಅನ್ನದಾನಿ ವಿಶ್ವಾಸ ವ್ಯಕ್ತಪಡಿಸಿದರು. ನಾವು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಜನರು ಕಾಂಗ್ರೆಸ್‌ನ ನಿಜ ಸ್ವರೂಪವನ್ನು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ. ಸಹಕಾರ ಚುನಾವಣೆಯಲ್ಲಿ ನಡೆಯುತ್ತಿರುವ ಅನಿಯಮಿತತೆಗಳ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

