ಸಚಿವ ಸ್ಥಾನದಿಂದ ರಾಜಣ್ಣ ವಜಾ, ವಿಧಾನಸಭಾ ಅಧಿವೇಶನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ವಿಪಕ್ಷಗಳು ರಾಜಣ್ಣ ತಲೆದಂಡವನ್ನೇ ಅಸ್ತ್ರ ಮಾಡಿಕೊಂಡಿದ್ರೆ, ಆಡಳಿತ ಪಕ್ಷ, ಯತ್ನಾಳ್ ಉಚ್ಚಾಟನೆಯ ವಿಚಾರದಲ್ಲಿ ತಿರುಗೇಟು ಕೊಟ್ಟಿದೆ.
ಮೊದಲು, ರಾಜಣ್ಣ ತಲೆದಂಡ ವಿಚಾರವಾಗಿ ಸದನದಲ್ಲಿ, ಹೆಚ್.ಕೆ. ಪಾಟೀಲ್ ವಿವರಣೆ ನೀಡೋಕೆ ಮುಂದಾದ್ರು. ಮಾನ್ಯ ರಾಜಣ್ಣ ಅವರು ಸಚಿವ ಸಂಪುಟದಿಂದ ನಿರ್ಗಮನದ ಬಳಿಕ ಅಂತಾ ಹೇಳುತ್ತಿದ್ದಂತೆ, ವಿಪಕ್ಷಗಳು ಸಿಎಂ ಸ್ಪಷ್ಟನೆ ನೀಡಬೇಕೆಂದು ಗದ್ದಲ ಆರಂಭಿಸಿದ್ರು.
ಇದಕ್ಕೆ ಗರಂ ಆದ ಸ್ಪೀಕರ್ ಖಾದರ್, ದೋಸೆ ಯಾರು ಮಾಡಿದ್ರೇನು? ದೋಸೆ ತಿಂದರೆ ಆಯ್ತಲ್ಲ. ಇವನೇ ಮಾಡ್ಬೇಕು? ಅವನೇ ಮಾಡಬೇಕು ಅಂತಾ ಏನಿದೆ? ಮುಖ್ಯಮಂತ್ರಿಗಳು ಅವರಿಗೆ ಹೇಳಿದ್ದಾರೆ. ಸರ್ಕಾರದ ಪರವಾಗಿ ಉತ್ತರ ಕೊಡ್ತಿದ್ದಾರೆ ಅಂತಾ ಗರಂ ಆದ್ರು.
ಬಳಿಕ ನೋಟಿಫಿಕೇಶನ್ ಸಲ್ಲಿಸಿ ಮಾತು ಮುಂದುವರೆಸಿದ ಹೆಚ್.ಕೆ. ಪಾಟೀಲ್, ಬಿಜೆಪಿ ಪಾಳಯದಲ್ಲಿನ ಕೆಲ ನಾಯಕರ ರಾಜೀನಾಮೆ ಬಗ್ಗೆ ಪ್ರಶ್ನಿಸಿದ್ರು. ನಾವು ನೀವು ಎಲ್ಲವನ್ನೂ ನೋಡಿದ್ದೇವೆ. ಆ ಕಡೆಯೂ 10ರಿಂದ 20 ಮಂದಿ ರಾಜೀನಾಮೆ ಕೊಟ್ಟಿದ್ದಾರೆ. ಒಂದಿಷ್ಟು ಮಂದಿಯನ್ನು ತೆಗೆದಿದ್ದಾರೆ. ಇನ್ನೊಂದಿಷ್ಟು ಮಂದಿಯನ್ನ ತೆಗೆಸಿಕೊಂಡಿದ್ದಾರೆ. ಇವೆಲ್ಲವೂ ಆಗುತ್ತದೆ. ನಾವೇನು ಚರ್ಚೆ ಮಾಡಿದ್ವಾ?
ಉಪರಾಷ್ಟ್ರಪತಿ ಧನ್‌ಕರ್ ರಾಜೀನಾಮೆ ಕೊಟ್ರು. ಆ ಬಗ್ಗೆ ಏನಾದ್ರೂ ಚರ್ಚೆ ಆಯ್ತಾ? ಅದೇ ಬೇರೆ? ನಮ್ಮದು ಬೇರೇನಾ?. ಹೀಗಾಗಿ ಚರ್ಚೆಗೆ ಅವಕಾಶವಿಲ್ಲ. ಇದನ್ನು ಇಲ್ಲಿಗೆ ಕ್ಲೋಸ್ ಮಾಡಿ ಅಂತಾ, ಸ್ಪೀಕರ್‌ಗೆ ಸಂಸದೀಯ ಸಚಿವರಾದ ಹೆಚ್.ಕೆ. ಪಾಟೀಲ್ ಮನವಿ ಮಾಡಿದ್ರು.
ಇದಕ್ಕೆ ಸಿಟ್ಟಾದ ವಿಪಕ್ಷಗಳು, ರಾಜೀನಾಮೆ ಬೇರೆ, ವಜಾ ಬೇರೆ ಅಲ್ವಾ. ನೀವು ರಾಜಣ್ಣರನ್ನು ವಜಾ ಮಾಡಿದ್ದೀರಾ? ಅವರೇನು ಅಂತಹ ಅಪರಾಧ ಮಾಡಿದ್ರು ಅನ್ನೋ ಬಗ್ಗೆ ಹೇಳಿ ಅಂತಾ ಕುಟುಕಿದ್ರು. ಇದಕ್ಕೆ ಯತ್ನಾಳ್ ಅವ್ರನ್ನ ಏಕೆ ತೆಗೆದ್ರಿ ಅಂತಾ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ರು. ಅವರನ್ನು ಪಾರ್ಟಿಯಿಂದ ತೆಗೆದಿರೋದು, ನೀವು ಕ್ಯಾಬಿನೆಟ್‌ನಿಂದ ತೆಗೆದಿರೋದು ಅಂತಾ ವಿಪಕ್ಷದವರು ಟಾಂಗ್ ಕೊಟ್ರು.
ಕ್ಯಾಬಿನೆಟ್‌ನಲ್ಲಿ ಇರೋದು ಬಿಡೋದು, ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅದೆಲ್ಲಾ ನಿಮಗ್ಯಾಕೆ. ಯತ್ನಾಳ್‌ರನ್ನು ಏಕೆ ತೆಗೆದಿದ್ದಾರೆ ಅನ್ನೋದನ್ನು ಹೇಳಲಿ. ನಾವು ರಾಜಣ್ಣ ಅವ್ರನ್ನ ಏಕೆ ತೆಗೆದಿದ್ದು ಅಂತಾ ಹೇಳ್ತೇವೆ. ನೀವು ಏನ್ ಬೇಕಾದ್ರೂ ಮಾಡಬಹುದು. ನಾವು ಎಲ್ಲದ್ದಕ್ಕೂ ಉತ್ತರ ಕೊಡ್ಬೇಕಾ ಅಂತಾ, ಪ್ರಿಯಾಂಕ್ ಖರ್ಗೆ ಗರಂ ಆದ್ರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ಲಾ ಮಿನಿಸ್ಟರ್ ಮಾತಾಡ್ತಿದ್ದಾರೆ. ನೀವ್ಯಾಕೆ ಮಧ್ಯೆ ಮಾತಾಡ್ತೀರಾ? ನಿಮಗೂ, ಅವರಿಗೂ ಏನ್ ವ್ಯತ್ಯಾಸ ಅಂತಾ ಗದರಿದ್ರು. ಬಳಿಕ ಸೈಲೆಂಟ್ ಆದ ಪ್ರಿಯಾಂಕ್ ಖರ್ಗೆ, ತಮ್ಮ ಆಸನದಲ್ಲಿ ಕುಳಿತುಕೊಂಡ್ರು.