Dharwad News: ಹೆಬ್ಬಾಳ ಗ್ರಾಮಸ್ಥರಿಗೆ ಕೆರೆಯ ನೀರೇ ಜೀವಾಳವಾಗಿದ್ದು, ಆದರೆ ಈಗ ಕೆರೆಯ ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದೇ ನೀರು ಕುಡಿದಿದ್ದರಿಂದ ಜನರಿಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಪಂಚಾಯತಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹೌದು ಇತ್ತೀಚೆಗೆ ಸೆಪ್ಟೆಂಬರ್ 12 ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ ಹಲವರು ವಾಂತಿ ಭೇದಿಯಿಂದ ಆಸ್ಪತ್ರೆ ಪಾಲಾಗಿದ್ದರು. ಆದರೆ ಈ ಘಟನೆ ಮಾಸುವ ಮುನ್ಮವೇ ಇದ್ದೀಗ ಅಂತಹದೇ ಸಮಸ್ಯೆ ಮತ್ತೊಂದು ಗ್ರಾಮದಲ್ಲಿ ಕಾಣುವಂತಾಗಿದೆ.
ನವಲಗುಂದ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕೆರೆಯ ನೀರು ಕಲುಷಿತಗೊಂಡಿದ್ದು, ಇದರಿಂದ ಗ್ರಾಮಸ್ಥರು ಅನೇಕ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಸಮಸ್ಯೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಬೀದಿಗೆ ಇಳಿದು ಪ್ರತಿಭಟನೆ ಮಾಡಿ, ಪಂಚಾಯತಿ ಪಿಡಿಓ ಧರ್ಮರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ನೀರು ಕಲುಷಿತಗೊಂಡಿರುವುದನ್ನು ಗ್ರಾಮಸ್ಥರ ಮುಂದೇ ಪಿಡಿಓ ಒಪ್ಪಿಕೊಂಡಿದ್ದು, ಆದರೆ ನೀರು ಖಾಲಿ ಮಾಡಿ ಮಲಪ್ರಭಾ ಕಾಲುವೆ ನೀರು ತುಂಬಿಸಲು ಪಿಡಿಓ ಹಿಂದೇಟು ಹಾಕುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಕೆರೆಯಲ್ಲಿನ ಕಲುಷಿತ ನೀರು ಖಾಲಿ ಮಾಡಿಸಿ, ಶುದ್ಧ ಕುಡಿಯುವ ನೀರು ಕೆರೆಗೆ ತುಂಬಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನೂ ನವಲಗುಂದ ಶಾಸಕರಾದ ಎನ್ ಹೆಚ್ ಕೊನರೆಡ್ಡಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಸಮಸ್ಯೆ ದೊಡ್ಡದಾಗುವ ಮುಂಚೆ ಪರಿಹಾರ ಹುಡುಕುತ್ತಾರೋ ಕಾದು ನೋಡಬೇಕಿದೆ.