Dharwad News: ಮಳೆಯ ನಿರೀಕ್ಷೆಯಲ್ಲಿ ಕಣ್ಣು ಆಕಾಶದತ್ತ… ಮನಸ್ಸು ಮಾತ್ರ ಶ್ರೀರಾಮನತ್ತ..!

Dharwad News: ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ರೈತರ ತಂಡವೊಂದು ಅಪರೂಪದ ಸಂಕಲ್ಪ ಕೈಗೊಂಡಿದೆ. ಕಾರು, ಬಸ್, ರೈಲು ಅಲ್ಲ… ರೈತನ ಜೀವನಾಡಿಯಾದ ಟ್ರ್ಯಾಕ್ಟರ್‌ನಲ್ಲೇ ಬರೋಬ್ಬರಿ 1,697 ಕಿಲೋಮೀಟರ್ ದೂರದ ಅಯೋಧ್ಯೆ ಯಾತ್ರೆ ಆರಂಭಿಸಿದ್ದಾರೆ. ಉತ್ತಮ ಮಳೆಯಾಗಿ ಹೊಲಗಳು ಹಸಿರಾಗಲಿ… ಅನ್ನದಾತನ ಬದುಕು ನೆಮ್ಮದಿಯಾಗಲಿ ಎಂಬ ಆಶಯದೊಂದಿಗೆ ಹೊರಟಿರುವ ಈ ವಿಶಿಷ್ಟ ಭಕ್ತಿಯಾತ್ರೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಇವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ರೈತರು. ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ಹೆಸರು, ಶೇಂಗಾ, ಉದ್ದು, ಮೆಣಸಿನಕಾಯಿ, ಹತ್ತಿ ಸೇರಿದಂತೆ ಹಲವು ಬೆಳೆಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಕೃತಿಯನ್ನೇ ನಂಬಿ ಬದುಕುವ ಅನ್ನದಾತರು ಈಗ ದೇವರ ಮೊರೆ ಹೋಗಿದ್ದು, ಗ್ರಾಮದ ಎಂಟು ಮಂದಿ ರೈತರು ಟ್ರ್ಯಾಕ್ಟರ್‌ನಲ್ಲೇ ಅಯೋಧ್ಯೆ ಯಾತ್ರೆ ಆರಂಭಿಸಿದ್ದಾರೆ.

ಸುಮಾರು 20 ದಿನಗಳ ಕಾಲ ಬರೋಬ್ಬರಿ 1,697 ಕಿಲೋಮೀಟರ್ ದೂರವನ್ನು ಟ್ರ್ಯಾಕ್ಟರ್‌ನಲ್ಲೇ ಕ್ರಮಿಸುವುದು ಈ ಯಾತ್ರೆಯ ವಿಶೇಷವಾಗಿದೆ. ಕೇಸರಿ ಧ್ವಜ ಹಾಗೂ ಶ್ರೀರಾಮನ ಬ್ಯಾನರ್‌ನಿಂದ ಅಲಂಕರಿಸಿದ ಟ್ರ್ಯಾಕ್ಟರ್‌ನಲ್ಲಿ ರೈತರು ಅಯೋಧ್ಯೆಯತ್ತ ಪಯಣ ಬೆಳೆಸಿದ್ದು, ಶ್ರೀರಾಮಲಲ್ಲಾ ದರ್ಶನ ಪಡೆದು ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ರೈತರ ಬೆಳೆಗಳು ಸಮೃದ್ಧವಾಗಿ ಬೆಳೆಯಲಿ, ಅನ್ನದಾತನ ಬದುಕಿನಲ್ಲಿ ನೆಮ್ಮದಿ ನೆಲೆಸಲಿ ಎಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಯಾತ್ರೆ ಆರಂಭಕ್ಕೂ ಮುನ್ನ ಮಂಟೂರು ಗ್ರಾಮದ ಶ್ರೀ ವಲ್ಲಭೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಟ್ರ್ಯಾಕ್ಟರ್‌ಗೆ ಪೂಜೆ ಸಲ್ಲಿಸಿ ಕೇಸರಿ ಧ್ವಜ ಕಟ್ಟಲಾಯಿತು. ಗ್ರಾಮದ ಮಹಿಳೆಯರು ಮಂಗಳಾರತಿ ಬೆಳಗಿ, ಕುಂಕುಮ ತಿಲಕ ಇಟ್ಟು ರೈತರಿಗೆ ಶುಭ ಹಾರೈಸಿದರು. ಗ್ರಾಮದ ಹಿರಿಯರು, ಯುವಕರು ಹಾಗೂ ಬಿಜೆಪಿ ಯುವ ಮುಖಂಡ ದೇವರಾಜ್ ದಾಡಿಬಾವಿ ಸೇರಿದಂತೆ ನೂರಾರು ಗ್ರಾಮಸ್ಥರು ರೈತರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು.

ಒಂದೆಡೆ ಮಳೆಯಿಲ್ಲದೆ ಹೊಲಗಳು ಬತ್ತುತ್ತಿವೆ… ಮತ್ತೊಂದೆಡೆ ಭರವಸೆ ಕಳೆದುಕೊಳ್ಳದ ರೈತರು ದೇವರ ಮೇಲಿನ ನಂಬಿಕೆಯನ್ನು ಹೊತ್ತು ಸಾವಿರಾರು ಕಿಲೋಮೀಟರ್ ಪಯಣ ಆರಂಭಿಸಿದ್ದಾರೆ. ಕಾರು ಅಲ್ಲ… ಬಸ್ ಅಲ್ಲ… ರೈತನ ಬದುಕಿನ ಪ್ರತೀಕವಾದ ಟ್ರ್ಯಾಕ್ಟರ್‌ನಲ್ಲೇ 1,697 ಕಿಲೋಮೀಟರ್ ದೂರದ ಅಯೋಧ್ಯೆ ಯಾತ್ರೆ ಕೈಗೊಂಡಿರುವುದು ಈ ಕಥೆಯ ವಿಶೇಷ. ಮಳೆಗಾಗಿ… ಬೆಳೆಗಾಗಿ… ಅನ್ನದಾತನ ಉಳಿವಿಗಾಗಿ… ಆರಂಭವಾದ ಈ ಸಂಕಲ್ಪಯಾತ್ರೆ ಕೇವಲ ಧಾರ್ಮಿಕ ಯಾತ್ರೆಯಲ್ಲ, ಸಂಕಷ್ಟದಲ್ಲಿರುವ ರೈತನ ಆಶಾವಾದ ಮತ್ತು ನಂಬಿಕೆಯ ಪ್ರತೀಕವಾಗಿದೆ.

ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author