Dharwad News: ಪ್ರೀತಿಸಿ ಮದುವೆಯಾಗಿದ್ದ ಜೋಡಿ… ಸಂಭ್ರಮದಿಂದ ಆರಂಭವಾಗಿದ್ದ ದಾಂಪತ್ಯ ಜೀವನ… ಆದರೆ ಅದೇ ಸಂಬಂಧ ಈಗ ರಕ್ತಸಿಕ್ತ ಅಂತ್ಯ ಕಂಡಿದೆ. ಪತ್ನಿಯೇ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರು ಗ್ರಾಮದಲ್ಲಿ ನಡೆದಿದೆ.
ರಡ್ಡೆರನಾಗನೂರು ಗ್ರಾಮದ ನಿವಾಸಿ 28 ವರ್ಷದ ವಿಶ್ವನಾಥ ಹಾದಿಮನಿ ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಮೃತನ ಪತ್ನಿ 27 ವರ್ಷದ ಕವಿತಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶ್ವನಾಥ್ ಮತ್ತು ಕವಿತಾ 2022ರ ಫೆಬ್ರವರಿಯಲ್ಲಿ ಪರಸ್ಪರ ಪ್ರೀತಿಸಿ, ಮನೆಯ ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ಹಾಗೂ ಜಗಳಗಳು ಆರಂಭವಾಗಿದ್ದವು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಕೆಲ ಸಮಯದಿಂದ ಕವಿತಾ ತವರು ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.
ಇತ್ತೀಚೆಗೆ ಕುಟುಂಬದ ಶುಭಕಾರ್ಯ ಹಿನ್ನೆಲೆಯಲ್ಲಿ ಮತ್ತೆ ಗಂಡನ ಮನೆಗೆ ಮರಳಿದ್ದ ಕವಿತಾ, ನಿನ್ನೆ ರಾತ್ರಿ ವಿಶ್ವನಾಥ್ ಜೊತೆ ಮತ್ತೆ ಜಗಳ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬಳಿಕ ಮನೆಯ ಬೆಡ್ರೂಮ್ನಲ್ಲೇ ಮಲಗಿದ್ದ ವಿಶ್ವನಾಥ್ ತಲೆಗೆ ಕಬ್ಬಿಣದ ಸಲಾಕೆಯಿಂದ ಬಲವಾಗಿ ಹೊಡೆದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ತೀವ್ರ ಗಾಯಗೊಂಡ ವಿಶ್ವನಾಥ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಜೀವನ ಹೀಗೆ ದುರಂತ ಅಂತ್ಯ ಕಂಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ್ದು, ಘಟನೆಯಿಂದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಂಗಮೇಶ್ ಸತ್ತೀಗೇರಿ, ಕರ್ನಾಟಕ ಟಿವಿ, ಧಾರವಾಡ




