Dharwad News: ದೇಹತ್ಯಾಗ ಹೋರಾಟಕ್ಕೆ ಜೈನ ಮುನಿ ಎಚ್ಚರಿಕೆ

Dharwad News: ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ದೇಹತ್ಯಾಗದ ಹೋರಾಟ ಮಾಡುತ್ತೇನೆ. ನವೆಂಬರ್ 19ರಿಂದ ಹೋರಾಟ ಆರಂಭಿಸಿ, ಡಿಸೆಂಬರ್ 7ರಿಂದ ಬೆಳಗಾವಿ ಸುವರ್ಣಸೌಧದ ಎದುರು ಆಮರಣ ಸತ್ಯಾಗ್ರಹ ನಡೆಸುತ್ತೇನೆ ಎಂದು ವರೂರಿನ ಜೈನ ಮುನಿ ಗುಣಧರನಂದಿ ಮಹಾರಾಜರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆಯೂ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಜೈನ ಮುನಿ ಗುಣಧರನಂದಿ ಮಹಾರಾಜರ ಆಕ್ರೋಶ… ಜೈನ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚನೆ, ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಹಾಗೂ ಪಾದಚಾರಿ ಸನ್ಯಾಸಿಗಳಿಗೆ ಶಾಲೆಗಳಲ್ಲಿ ತಂಗಲು ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವೆಂಬರ್ 19ರಂದು ಬಾಗಲಕೋಟೆ ಜಿಲ್ಲೆಯ ತೇರದಾಳದ ಮಠದಿಂದ ಹೋರಾಟ ಆರಂಭಿಸಲಿದ್ದು, ಅಲ್ಲಿನ ಜನಪ್ರತಿನಿಧಿಗಳಿಗೆ ಮೊದಲು ಮನವಿ ಸಲ್ಲಿಸಲಿದ್ದಾರೆ. ಬಳಿಕ ಡಿಸೆಂಬರ್ 4ರಂದು ಚಿಕ್ಕೋಡಿಯಿಂದ ಬೃಹತ್ ಪಾದಯಾತ್ರೆ ನಡೆಸಿ, ಡಿಸೆಂಬರ್ 7ರಿಂದ ಬೆಳಗಾವಿಯ ಸುವರ್ಣಸೌಧದ ಎದುರು ಆಮರಣ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.

ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದರೂ ಸೌಜನ್ಯಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಸನ್ಯಾಸಿಗಳಿಗೆ ಗೌರವ ನೀಡದ ಸಚಿವರು ಸಂಪುಟದಲ್ಲಿ ಏಕೆ ಇರಬೇಕು? ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಲಿಖಿತ ಭರವಸೆ ನೀಡಬೇಕು. ಹೋರಾಟದ ವೇಳೆ ಬಂಧಿಸಿದರೂ ಅಲ್ಲಿಯೇ ದೇಹತ್ಯಾಗ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿಯೇ ಹೋರಾಟ ನಡೆಸುತ್ತಿದ್ದೇವೆ. ಆದರೆ ಮನವಿ ಸಲ್ಲಿಸಿ, ಕಾಲು ಕೈ ಮುಗಿಯುವ ಸಮಯ ಮುಗಿದಿದೆ. ಈಗ ನಮ್ಮ ಸಮಾಜಕ್ಕೆ ನ್ಯಾಯ ಸಿಗದಿದ್ದರೆ ದೇಹತ್ಯಾಗದ ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಗುಣಧರನಂದಿ ಮಹಾರಾಜರು ಹೇಳಿದ್ದಾರೆ. ಇವರ ಎಚ್ಚರಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

About The Author