Dharwad News: ಅಕ್ಸಾ ಸಂಘಟನೆ ಹೋರಾಟಕ್ಕೆ ಪೊಲೀಸ್ ಬ್ರೇಕ್

Dharwad News: ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಕೆಪಿಎಸ್‌ಸಿ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧಾರವಾಡದಲ್ಲಿ ಅಕ್ಸಾ ವಿದ್ಯಾರ್ಥಿ ಸಂಘಟನೆ ಹೋರಾಟಕ್ಕೆ ಮುಂದಾಗಿದೆ. ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರೂ ಹೋರಾಟ ನಡೆಸಲು ಸಂಘಟನೆ ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ, ಸಂಘಟನೆಯ ಅಧ್ಯಕ್ಷ ಕಾಂತಕುಮಾರ್‌ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮಿಚಿಗನ್ ಮೈದಾನ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಧಾರವಾಡದ ಮಿಚಿಗನ್ ಮೈದಾನದಲ್ಲಿ ಅಕ್ಸಾ ಸಂಘಟನೆ ವತಿಯಿಂದ ಕೆಪಿಎಸ್‌ಸಿ ಅಕ್ರಮ ಹಾಗೂ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಹೋರಾಟಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಇದರ ನಡುವೆಯೂ ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸಂಘಟನೆಯ ಅಧ್ಯಕ್ಷ ಕಾಂತಕುಮಾರ್‌ಗಾಗಿ ಶೋಧ ನಡೆಸುತ್ತಿದ್ದಾರೆ.

ಧಾರವಾಡ ನಗರದ ಸಾಧನಕೇರಿ ಬಡಾವಣೆಯಲ್ಲಿ ಕಾಂತಕುಮಾರ್ ಇರುವಿಕೆಯ ಮಾಹಿತಿ ಆಧರಿಸಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೋರಾಟದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಿಚಿಗನ್ ಮೈದಾನ ಹಾಗೂ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೈದಾನಕ್ಕೆ ಆಗಮಿಸುವವರ ಮೇಲೆ ಪೊಲೀಸರು ನಿಗಾ ವಹಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಒಂದೆಡೆ ಹೋರಾಟಕ್ಕೆ ಅನುಮತಿ ಇಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದ್ದರೆ, ಮತ್ತೊಂದೆಡೆ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವುದಾಗಿ ಅಕ್ಸಾ ಸಂಘಟನೆ ಪಟ್ಟು ಹಿಡಿದಿದೆ. ಹೀಗಾಗಿ ಧಾರವಾಡದ ಮಿಚಿಗನ್ ಮೈದಾನ ಸುತ್ತಮುತ್ತ ಇದೀಗ ಪೊಲೀಸ್ ಕಟ್ಟೆಚ್ಚರ ಮುಂದುವರಿದಿದೆ.

About The Author