Dharwad News: ವರವಾಗಬೇಕಿದ್ದ ಚಿಗರಿ ಬಸ್ ಯೋಜನೆ ಶಾಪವಾಯ್ತು ಅಂತಿದ್ದಾರೆ ಹು-ಧಾ ಜನ

Dharwad News: ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳ ಮಧ್ಯೆ ಶೀಘ್ರ ಮತ್ತು ಸುಗಮ ಸಂಚಾರಕ್ಕಾಗಿ ಅನುಷ್ಠಾನಗೊಂಡ ಚಿಗರಿ ಬಸ್ ಯೋಜನೆ ವರವಾಗಿದ್ದಕ್ಕಿಂತ ಶಾಪವಾಗಿದ್ದೇ ಹೆಚ್ಚು.

ಬಿಆರ್‌ಟಿಎಸ್ ರಸ್ತೆ, ಬ್ಯಾರಿಕೇಡ್‌ಗಳು, ಅವೈಜ್ಞಾನಿಕ ಕಾಮಗಾರಿ ಒಂದೆಡೆಯಾದರೆ ಬಿಆರ್‌ಟಿಎಸ್ ರಸ್ತೆ ಮಧ್ಯೆಯೇ ಸಂಚರಿಸುವ ಚಿಗರಿ ಬಸ್ ಅವಾಂತರಗಳ ಮೇಲೆ ಅವಾಂತರ ಸೃಷ್ಟಿಸುತ್ತಲೇ ಇವೆ.

ಹೌದು! ಬಿಆರ್‌ಟಿಎಸ್‌ಗೆ ಈಗ ಚಿಗರಿ ಬಸ್‌ಗಳ ನಿರ್ವಹಣೆಯೇ ತಲೆನೋವಾಗಿದೆ. ಈ ಚಿಗರಿ ಬಸ್‌ಗಳ ಸರಿಯಾದ ನಿರ್ವಹಣೆ ಇಲ್ಲದೇ ಇರುವ ಕಾರಣಕ್ಕೋ ಅಥವಾ ಚಾಲಕರ ಅಜಾಗರೂಕತೆಯೋ ಗೊತ್ತಿಲ್ಲ. ಆಗಾಗ ಚಿಗರಿ ಬಸ್‌ಗಳಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಅಲ್ಲದೇ ಆಗಾಗ ಈ ಬಸ್‌ಗಳಲ್ಲಿ ಬೆಂಕಿ ಸಹ ಕಾಣಿಸಿಕೊಳ್ಳುತ್ತಿದೆ.

ಇತ್ತೀಚೆಗಷ್ಟೇ ಧಾರವಾಡದ ಜೆಎಸ್‌ಎಸ್ ಕಾಲೇಜು ಮುಖ್ಯ ಗೇಟ್‌ಗೆ ಚಿಗರಿ ಬಸ್ ಡಿಕ್ಕಿ ಹೊಡೆದಿತ್ತು. ಮೊನ್ನೆಯಷ್ಟೇ ಚಿಗರಿ ಬಸ್‌ನಲ್ಲಿ ಬೆಂಕಿ ಸಹ ಕಾಣಿಸಿಕೊಂಡಿತ್ತು. ಇದಕ್ಕಿಂತ ಮುಂಚೆ ಚಿಗರಿ ಬಸ್‌ಗಳ ಮಧ್ಯೆಯೇ ಅನೇಕ ಅಪಘಾತಗಳು ಸಂಭವಿಸಿವೆ.

ಇನ್ನು ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ಬೈಕ್ ಸವಾರರಿಗೆ ಈ ಚಿಗರಿ ಬಸ್‌ಗಳು ಗುದ್ದಿದ ಸಾವಿರ ಸಾವಿರ ಉದಾಹರಣೆಗಳು ಕಣ್ಣ ಮುಂದೆಯೇ ಇವೆ. ಏನೇ ಆಗಲಿ ಸುಗಮ ಮತ್ತು ಶೀಘ್ರ ಸಂಚಾರಕ್ಕೆ ಅನುಕೂಲವಾಗಲೆಂದು ಜಾರಿಯಾದ ಈ ಬಿಆರ್‌ಟಿಎಸ್‌ ಯೋಜನೆಗೆ ಜನ ಹೊಗಳಿದ್ದಕ್ಕಿಂತ ತೆಗಳಿದ್ದೇ ಹೆಚ್ಚು.

About The Author