Political News: ಇಂದು ಹಾವೇರಿ ಜಿಲ್ಲೆಯ ನೆಗಳೂರು ಗ್ರಾಮದಲ್ಲಿ ಪ್ರಭೃತಿ (Prabhriti) ಏಥೇನಾಲ್ ಪ್ರೈವೇಟ್ ಲಿಮಿಟೆಡ್ ನೂತನ ಘಟಕವನ್ನು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿರುವ ಅವರು, ಇವತ್ತು ರೈತರಿಗೆ ವರದಾನ ಆಗುವ ಕಾರ್ಖಾನೆ ಹಾವೇರಿ ಜಿಲ್ಲೆಗೆ ಬಂದಿದೆ. ಕೃಷ್ಣಾ ನದಿ ತೀರದಲ್ಲಿ ಸಕ್ಕರೆ ಕಾರ್ಖಾನೆ ಬಂದಿದ್ದವು ಅದರಿಂದ ರೈತರಿಗೆ ಅನುಕೂಲ ಆಗಿತ್ತು. ನಮ್ಮ ಹಾವೇರಿ ಜಿಲ್ಲೆಯಲ್ಲಿ ನಲವತ್ತು ವರ್ಷದ ಹಿಂದೆ ನಮ್ಮ ಹಿರಿಯರು ಸಂಗೂರು ಸಕ್ಕರೆ ಕಾರ್ಖಾನೆ ಮಾಡುವ ಕನಸು ಕಂಡಿದ್ದರು. ಆದರೆ ಇತ್ತು ರೈತರಿಗೆ ಅಷ್ಟೊಂದು ಅನುಕೂಲ ಆಗಲಿಲ್ಲ. ಹಾವೇರಿ ಜಿಲ್ಲೆಯ ಹಿರೆಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಹಾವೇರಿ ತಾಲೂಕಿನಲ್ಲಿ ಶೇ 90% ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತೇವೆ ಎಂದು ಹೇಳಿದರು.
ರೈತನಿಗೆ ಬೆಳೆಯಲು ನೀರು ಬೇಕು, ನೀರಿನ ಜೊತೆ ಬೆವರು ಸೇರಿಸಿ ಬಂಗಾರದ ಬೆಳೆಯನ್ನು ಬೆಳೆಯುತ್ತಾರೆ. ಅದನ್ನು ಬಂಗಾರದ ಗಟ್ಟಿಯಾಗಿ ಮಾಡಲು ಇಂತಹ ಕಾರ್ಖಾನೆ ಬೇಕು. ಹಾವೇರಿಯಲ್ಲಿ ಐದು ಎಥೆನಾಲ್ ಕಾರ್ಖಾನೆ ಬಂದಿವೆ. ಹಾವೇರಿ ಜಿಲ್ಲೆ ಬರುವ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ಕಾಣುವ ವಿಶ್ವಾಸ ಇದೆ. ಇದಕ್ಕೆ ತಂತ್ರಜ್ಞಾನ ಮತ್ತು ಸರ್ಕಾರದ ನೀತಿ ಕಾರಣ. ಬ್ರೆಜಿಲ್ ನಲ್ಲಿ ಎಥೆನಾಲ್ ಮಾಡುವ ತಂತ್ರಜ್ಞಾನ ಬಹಳ ಹಿಂದೆಯೇ ಬಂದಿದೆ. ಕಬ್ಬಿನಿಂದ ಸುಮಾರು 80 ಉಪ ಉತ್ಪನ್ನ ಮಾಡಲಾಗುತ್ತದೆ. ಇಡಿ ಬ್ರೆಜಿಲ್ ಅರ್ಥಿಕತೆ ಕಬ್ಬು ಸಕ್ಕರೆ ಕಾರ್ಖಾನೆ ಮೇಲೆ ನಿಂತಿದೆ. ಭಾರತಕ್ಕೆ ಬಹಳ ತಡವಾಗಿ ಬಂದಿದೆ. ಕರ್ನಾಟಕ ಇದನ್ನು ಬಹಳ ಬೇಗ ಜಾರಿಗೆ ತಂದಿದೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಇದರಲ್ಲಿ ಹೆಚ್ಚು ಪರಿಣಿತರಾಗಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆರಂಭ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸ್ನೇಹಿ ತೈಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುತ್ತದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಥೆನಾಲ್ ಕಂಪನಿಗಳಿಗೆ ಬಹಳ ಬೇಡಿಕೆ ಬರುತ್ತದೆ. ಭಾರತವೇ ಗ್ರೀನ್ ಎಜರ್ನಿ ರಪ್ತು ಮಾಡುವ ಕಾಲ ಬರುತ್ತದೆ.
ಈ ತಂತ್ರಜ್ಞಾನ ಬಳಕೆ ಮಾಡಿ ನಮ್ಮ ರೈತರೇ ಈ ಕಾರ್ಖಾನೆ ಮಾಡಿದ್ದಾರೆ, ಎಂಟು ಜನ ಯುವಕರೇ ಈ ಕಾರ್ಖಾನೆ ಮಾಡಿದ್ದಾರೆ. ಇದು ಮೊದಲು ಶಿಗ್ಗಾವಿ ಕ್ಷೇತ್ರದಲ್ಲಿ ಆರಂಭ ಆಗಿತ್ತು. ಕಳೆದ ನಾಲ್ಕೈದು ವರ್ಷದಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವರದಾ ಮತ್ತು ತುಂಗಭದ್ರಾ ನದಿ ದಡದಲ್ಲಿ ಕಾರ್ಖಾನೆಗಳು ಬರುತ್ತಿವೆ. ಈ ಕಾರ್ಖಾನೆ ಕಬ್ಬಿನ ಮೇಲೆಯೆ ಅವಲಂಬಿತವಾಗಿಲ್ಲ. ಗೋವಿನ ಜೋಳ ಮತ್ತು ಅಕ್ಕಿ ಉಪಯೋಗಿಸಿ ಎಥೆನಾಲ್ ಮಾಡಲಾಗುತ್ತಿದೆ. ಗೋವಿನ ಜೋಳ ಹೆಚ್ಚಾಗಿ ರೈತರು ಬೆಳೆಯುತ್ತಾರೆ ಅದಕ್ಕೆ ಬೆಲೆ ಬರಲು ಇಂತಹ ಕಾರ್ಖಾನೆಗಳು ಕಾರಣ. ಈಗ ರೈತರಿಗೆ ನೇರವಾಗಿ ಲಾಭ ಸಿಗುತ್ತದೆ. ಬಳ್ಳಾರಿ ಸಹೋದರರು ಮಾಡಿರುವುದು ಬಹಳ ಸಂತೋಷವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ .
ತುಂಗಭದ್ರಾ ನದಿಯಲ್ಲಿ ಬೇಸಿಗೆಯ ಮೂರ್ನಾಲ್ಕು ತಿಂಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಅದಕ್ಕೆ ವರದಾ ನದಿಯಿಂದ ತರಬೇಕಾಗುತ್ತದೆ ಅದಕ್ಕೆ ಬೆಡ್ತಿಯಿಂದ ನೀರು ತರಬೆಕಾಗುತ್ತದೆ. ವರದಾ ಬೆಡ್ತಿ ನದಿ ಜೊಡಣೆಗೆ ಕೆಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದೆ. ರಾಜ್ಯ ಸರ್ಕಾರ ಇದನ್ನು ಮುಂದೆ ತೆಗೆದುಕೊಂಡು ಹೋಗಬೇಕು. ರಾಜ್ಯ ಸರ್ಕಾರ ಕೂಡ ಒಪ್ಪಿಕೊಂಡಿದೆ. ಇದರಿಂದ ಸುಮಾರು 18 ಟಿಎಂಸಿ ನೀರು ಬರುತ್ತದೆ. ಇದರಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಇದಕ್ಕೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ನಾನು ಸಿಎಂ ಇದ್ದಾಗ ಬಿ.ಸಿ.ಪಾಟೀಲರು ಕೃಷಿ ಸಚಿವರಿದ್ದಾಗ ಕೃಷಿ ಆಧಾರಿತ ಉದ್ಯಮಗಳನ್ನು ಹೆಚ್ಚಾಗಿ ಮಾಡಬೇಕು. ಹಾವೇರಿಯಿಂದ ರಾಯಚೂರು ವರೆಗೆ ಸುಮಾರು 7 ಲಕ್ಷ ಹೆಕ್ಟೇರ್ ನೀರಾವರಿ ಮಾಡಬೇಕು ಎಂದು ಕನಸು ಕಂಡಿದ್ದೇವೆ. ಅದರ ಸುಮಾರು ನೂರು ಕೃಷಿ ಆಧಾರಿತ ಉದ್ಯಮ ಮಾಡುವ ಗುರಿ ಇದೆ. ಇಂದು ಹಾವೇರಿಯಿಂದ ಆರಂಭವಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ.
ಬರುವ ದಿನಗಳಲ್ಲಿ ತರಕಾರಿಯಿಂದ ಎಲ್ಲ ರೀತಿಯ ಉತ್ಪನ್ನಗಳನ್ನು ಇಲ್ಲಿಂದಲೇ ಪ್ರೊಸೆಸ್ ಮಾಡಿ ರಪ್ತುವಂತಾಗಬೇಕು. ಇದರಿಂದ ಯುವಕರಿಗೆ ಉದ್ಯೋಗ ದೊರೆಯಲಿದೆ. ಇಲ್ಲಿ ಎಥೆನಾಲ್ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಲಿ. ಇದಕ್ಕೆ ಬಹಳ ಭವಿಷ್ಯ ಇದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಧನ್ಯವಾದ ಹೇಳಬೇಕು. ಅವರು ನಮಗೆ ರಷ್ಯಾದಿಂದ ಪೆಟ್ರೋಲ್ ಆಮದು ಮಾಡಿಕೊಳ್ಳಬೇಡಿ ಅಂದರು. ನಾವು ತೆಗೆದುಕೊಲ್ಳುತ್ತಿರುವುದಕ್ಕೆ ಅವರು ನಮ್ಮ ಮೇಲೆ ಹೆಚ್ಚಿನ ತೆರಿಗೆ ಹಾಕಿದರು. ನಮ್ಮ ಪ್ರಧಾನಿ ಮೋದಿಯವರು ಬಯೋ ಫಿಯೊಲ್ ಪಾಲಿಸಿ ಮಾಡಿದ್ದಾರೆ ಬೊಮ್ಮಾಯಿ ಹೇಳಿದ್ದಾರೆ.
ಮೊದಲು ಪೆಟ್ರೊಲ್ ನಲ್ಲಿ ಎಥೆನಾಲ್ ಶೇ 5%. ಸೇರಿಸಲಾಗುತ್ತಿತ್ತು. ಈಗ ಶೇ 10% ರಷ್ಟು ಸೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶೇ 80% ಎಥೆನಾಲ್ ಶೇ 20% ರಷ್ಟು ಪೆಟ್ರೋಲ್ ಬಳಕೆ ಮಾಡುವ ಕಾಲ ಬರುತ್ತದೆ. 2026 ಕ್ಕೆ ಟೊಯೊಟಾ, ಸುಝಕಿ ಯಂತಹ ಕಂಪನಿಗಳು ಶೇ 85% ಎಥೆನಾಲ್ ಶೇ 15 ರಷ್ಟು ಪೆಟ್ರೋಲ್ ಬಳಕೆ ಮಾಡುವ ಕಾರು ಉತ್ಪಾದನೆ ಮಾಡುತ್ತಿವೆ. ಪ್ರಧಾನಿ ಮೋದಿಯವರು ನಾವು ಪರಿಸರ ಸ್ನೇಹಿ ತೈಲ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತೇವೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಎಥೆನಾಲ್ ಕಂಪನಿಗಳಿಗೆ ಬಹಳ ಬೇಡಿಕೆ ಇರುತ್ತದೆ. ಟ್ರಂಪ್ ಮಾಡಿರುವ ನೀತಿಯಿಂದ ಸ್ವಲ್ಪ ದಿನ ಸಮಸ್ಯೆ ಆಗಲಿದೆ ನಮ್ಮ ಪ್ರಧಾನಿಯವರು ಬರುವಂತಹ ದಿನಗಳಲ್ಲಿ ಭಾರತವೇ ಬಯೊ ಎನರ್ಜಿಯಲ್ಲಿ ಆತ ನಿರ್ಭರ ಆಲಿದೆ ಎಂದು ಹೇಳಿದ್ದಾರೆ. ಗ್ರೀನ್ ಎನರ್ಜಿ ರಪ್ತು ಮಾಡುವ ಸಮಯ ಭಾರತಕ್ಕೆ ಬರುತ್ತದೆ ಅದಕ್ಕೆ ಇಲ್ಲಿಂದಲೂ ಹೆಚ್ಚಿನ ರಪ್ತು ಮಾಡುವಂತಾಗಲಿ, ಹಾವೇರಿ ಜಿಲ್ಲೆಯ ಹೆಸರು ಮುಂಚೂಣಿಯಲ್ಲಿ ಇರಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಈ ಸಂಧರ್ಭದಲ್ಲಿ ಮಾಲಕರು ಹಾಗೂ ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ಬಿ.ಸಿ ಪಾಟೀಲ್, ಮಾಜಿ ಶಾಸಕರುಗಳಾದ ಶಿವರಾಜ ಸಜ್ಜನ, ವಡ್ನಾಳ ರಾಜಣ್ಣ, ವಿ.ಎಸ್ ಪಾಟೀಲ್, ಉದ್ಯಮಿಗಳಾದ ಬಿ.ಸಿ ಉಮಾಪತಿ, ಸಂತೋಷ ಪಾಟೀಲ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.