Political News: ಶ್ರೀಮಂತರು ಗ್ಯಾರಂಟಿ ಯೋಜನೆಯನ್ನು ಕೈಬಿಡಿ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು, ಈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಸಿ.ಟಿ.ರವಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಗ್ಯಾರಂಟಿ ಘೋಷಣೆ ಮಾಡುವಾಗ, ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಬಸ್ಸಲ್ಲಿ ಅತ್ತೆ ಮನೆಗೆ ಹೋಗ್ಬೋದು, ಗಂಡನ ಮನೆಗೆ ಹೋಗ್ಬೋದು, ಅಂತೆಲ್ಲಾ ಬಣ್ಣ ಬಣ್ಣದ ಮಾತನಾಡುವಾಗ ಕಾಂಗ್ರೆಸ್ ಮುಖಂಡರಿಗೆ ಇದು ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವುತ್ತದೆ ಎನ್ನುವ ಅರಿವಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈಗ ರಾಜ್ಯ ದಿವಾಳಿಯಂಚಿಗೆ ಬಂದಿರುವಾಗ ಶ್ರೀಮಂತರು ಗ್ಯಾರಂಟಿ ಸೌಲಭ್ಯ ಕೈಬಿಡಿ ಎಂದು ಕರೆ ನೀಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಗ್ಯಾರಂಟಿ ಯೋಜನೆ ಘೋಷಿಸುವಾಗಲೇ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಎನ್ನಬಹುದಿತ್ತಲ್ಲ? ಅವೈಜ್ಞಾನಿಕ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್ ಪಕ್ಷ, ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಳ್ಳುವ ತಂತ್ರವನ್ನು ಅನುಸರಿಸುತ್ತಿದೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ರಾಜ್ಯದಲ್ಲಿ ಗಗನಕ್ಕೇರಿದೆ. ಸಿದ್ದರಾಮಯ್ಯ ಈಗಾಗಲೇ 3.5 ಲಕ್ಷ ಕೋಟಿ ಸಾಲದ ಹೊರೆಯನ್ನು ರಾಜ್ಯದ ಮೇಲೆ ಹೊರಿಸಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಸಿಕ್ಕಿರುವುದು ಕನ್ನಡಿಗರ ದೌರ್ಭಾಗ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ರವಿ ಆಕ್ರೋಶ ವ್ಕ್ತಪಡಿಸಿದ್ದಾರೆ.




