Political news: ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ ಮಾತನಾಡಿದ್ದು, ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ತೂಕದಲ್ಲಿ ನಡೆಯುತ್ತಿದ್ದ ಮೋಸವನ್ನು ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್ ತೂಕ ಯಂತ್ರವನ್ನು ಅಳವಡಿಸಲಾಗಿದೆ. ಸರ್ಕಾರದ ವತಿಯಿಂದಲೇ 11 ಜಾಗಗಳಲ್ಲಿ ಡಿಜಿಟಲ್ ತೂಕ ಯಂತ್ರಗಳನ್ನು ಅಳವಡಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ ಎಂದರು.
ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರವು ಉಚಿತವಾಗಿ ಎಪಿಎಂಸಿ ಗಳಲ್ಲಿ ಸ್ಥಾಪಿಸಿರುವ ತೂಕದ ಯಂತ್ರಗಳಲ್ಲಿ ಉಚಿತವಾಗಿ ತೂಕ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
2024-25 ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿವೆ. ರೈತರಿಗೆ ಈ ಅವಧಿಯಲ್ಲಿ 18,221.88 ಕೋಟಿ ರೂ. ಗಳನ್ನು ಎಫ್.ಆರ್. ಪಿ. ದರದಂತೆ ಪಾವತಿಸಬೇಕಾಗಿತ್ತು. ಆದರೂ ಸಹ ಕೆಲವು ಕಡೆ ರಿಕವರಿ (ಸಕ್ಕರೆ ಇಳುವರಿ) ಹೆಚ್ಚು ಬಂದ ಕಾರಣ 19,569.15 ಕೊಟಿ ರೂ. ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ.
ಇಷ್ಟೆಲ್ಲಾ ಮಾಡಿದ್ದರೂ ಸಹ, ರೈತರ ಮುಗ್ಧತೆಯನ್ನು ವಿರೋಧ ಪಕ್ಷದವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ಬಿ.ಜೆ.ಪಿ. ಯವರ ಮರಳು ಮಾತುಗಳಿಗೆ ಬಲಿಯಾಗಬಾರದು. ನಮ್ಮ ಸರ್ಕಾರವು ಸಂವಾದದಲ್ಲಿ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ ಮತ್ತು ನಿರಂತರವಾಗಿ ರೈತ ಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆದ್ದರಿಂದ, ನಾಳೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳ ಜೊತೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ರೈತ ಮುಖಂಡರುಗಳ ಜೊತೆ ಚರ್ಚಿಸಲು ಸಭೆ ಕರೆದಿದ್ದೇವೆ. ಸದರಿ ಸಭೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿ ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ. ರಾಜ್ಯದ ಕಬ್ಬು ಬೆಳೆಯುವ ರೈತರು ಸರ್ಕಾರದ ಮೇಲೆ ವಿಶ್ವಾಸವಿಡಬೇಕೆಂದು ಹಾಗೂ ವಿರೋಧ ಪಕ್ಷಗಳ ರಾಜಕಾರಣಕ್ಕೆ ಬಲಿಯಾಗಬಾರದೆಂದು ನಾನು ಮನವಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದ್ದಾರೆ.

