ನವದೆಹಲಿ: ಕಾಂಗ್ರೆಸ್-ಜೆಡಿಎಸ್ ನ ಅನರ್ಹ ಶಾಸಕರು ಕಾನೂನು ಹೋರಾಟಕ್ಕಿಳಿದಿದ್ದು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಹೇಗಾದರೂ ಮಾಡಿ ಸ್ಪೀಕರ್ ನೀಡಿರುವ ಅನರ್ಹತೆ ಆದೇಶಕ್ಕೆ ತಡೆ ತರಲು ಯತ್ನಿಸುತ್ತಿರೋ ಅನರ್ಹರು ದೋಸ್ತಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಕಿಡಿ ಕಾರುತ್ತಿದ್ದಾರೆ. ಇನ್ನು ಅನರ್ಹಗೊಳಿಸೋ ಮೂಲಕ ರಾಜಕೀಯ ಭವಿಷ್ಯ ಹಾಳು ಮಾಡಲೆತ್ನಿಸುತ್ತಿರುವವರಿಗೆ ತಿರುಗೇಟು ನೀಡಿರೋ ವಿಶ್ವನಾಥ್ ನಮ್ಮ ಭವಿಷ್ಯ ನಾವೇ ರೂಪಿಸಿಕೊಳ್ಳುತ್ತೇವೆ ಅಂತ ಟಾಂಗ್ ನೀಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನವಾಗಲು ಕಾರಣರಾಗಿದ್ದ ಅತೃಪ್ತರು ಇದೀಗ ಅನರ್ಹರಾಗಿದ್ದಾರೆ. ಅತೃಪ್ತರಿಗೆ ತಕ್ಕ ಪಾಠ ಕಲಿಸುತ್ತೇವೆಂದು ಪದೇ ಪದೇ ಹೇಳುತ್ತಿದ್ದ ದೋಸ್ತಿ ನುಡಿದಂತೆಯೇ ತಮ್ಮ ಹಠ ಸಾಧಿಸಿದ್ದು ಪಕ್ಷಾಂತರಿಗಳನ್ನು ಬಗ್ಗುಬಡಿಯೋದಕ್ಕೆ ಸಮರ ಸಾರಿದ್ದಾರೆ. ಇನ್ನೊಂದೆಡೆ ಅತೃಪ್ತ ಶಾಸಕರು ಮಾತ್ರ ನಾವು ಮಾಡಿದ್ದೆಲ್ಲಾ ಸರಿ, ನಿಮ್ಮಿಂದ ನಮಗೇನು ಕೇಡು ಮಾಡಲು ಸಾಧ್ಯವಿಲ್ಲ ಅನ್ನೋ ರೀತಿ ದೋಸ್ತಿಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಇನ್ನು ನವದೆಹಲಿಯಲ್ಲಿ ಮಾತನಾಡಿದ ಅನರ್ಹ ಶಾಸಕ ಎಚ್.ವಿಶ್ವನಾಥ್, ನಮ್ಮ ಭವಿಷ್ಯ ನಾವೇ ರೂಪಿಸಿಕೊಳ್ಳುತ್ತೇವೆ. ಒಂದು ಸಂಸಾರಕ್ಕೆ ಸೀಮಿತವಾಗಿದ್ದ ಸರ್ಕಾರದ ವಿರುದ್ಧ ಕ್ರಾಂತಿ ನಡೆಸಿದ್ದೇವೆ ಅಂತ ಜೆಡಿಎಸ್ ಕುಟುಂಬ ರಾಜಕಾರಣ ಕುರಿತು ಲೇವಡಿ ವಿಶ್ವನಾಥ್ ಲೇವಡಿ ಮಾಡಿದ್ರು. ಇನ್ನು ಸ್ಪೀಕರ್ ರಮೇಶ್ ಕುಮರ್ ಯಾರದ್ದೋ ಋಣ ತೀರಿಸಲು ನಮ್ಮನ್ನು ಅನರ್ಹಗೊಳಿಸಿದ್ದಾರೆ ಅಂತ ಕಿಡಿ ಕಾರಿದ್ದಾರೆ.
ಬಿಜೆಪಿಯ ಹಣದ ಆಮಿಷಕ್ಕೆ ಬಲಿಯಾಗಿ ಅತೃಪ್ತರು ರಾಜೀನಾಮೆ ನೀಡಿದ್ದಾರೆ ಅನ್ನೋ ಆರೋಪಕ್ಕೆ ಪ್ರತಿಕ್ರಿಯಿದ ಎಚ್. ವಿಶ್ವನಾಥ್, ನನ್ನ ಜೊತೆ ರಾಜೀನಾಮೆ ನೀಡಿರುವ ಭೈರತಿ ಬಸವರಾಜ್ ಹಾಗೂ ಎಂಟಿಬಿ ನಾಗರಾಜ್ ಗೆ ದುಡ್ಡಿನ ಅಗತ್ಯವಿಲ್ಲ ಅಂತ ಆರೋಪವನ್ನು ಅಲ್ಲಗಳೆದ್ರು. ಇನ್ನು ಯಾರನ್ನೂ ಸಮನಾಗಿ ಕಾಣದ ನಾಲ್ಕು ಜನರ ಸರ್ಕಾರದ ವಿರುದ್ಧ ನಾವೆಲ್ಲರೂ ಬಂಡೆದ್ದಿದ್ದು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಅಂತ ವಿಶ್ವನಾಥ್ ಇದೇ ವೇಳೆ ತಿರುಗೇಟು ನೀಡಿದ್ದಾರೆ.