ಕರೂರು ಕಾಲ್ತುಳಿತದಿಂದ ಮನನೊಂದು, ಟಿವಿಕೆ ಪಕ್ಷದ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ 52 ವರ್ಷದ ಅಯ್ಯಪ್ಪನ್, ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಭೀಕರ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ. ಪೊಲೀಸರು ಸೂಕ್ತ ವ್ಯವಸ್ಥೆಯನ್ನು ಒದಗಿಸಿಲ್ಲ ಎಂದು, ಡೆತ್‌ನೋಟ್‌ನಲ್ಲಿ ಅಯ್ಯಪ್ಪನ್ ಬರೆದಿದ್ದಾರೆ.
ಸೆಪ್ಟೆಂಬರ್ 27ರ ಶನಿವಾರ ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದುವರೆಗೆ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ದುರಂತ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ವಿಜಯ್ ತಡವಾಗಿ ಬಂದಿದ್ದೇ ಇಷ್ಟಕ್ಕೆಲ್ಲಾ ಕಾರಣ. ರೋಡ್ ಶೋಗೆ ಅನುಮತಿ ಇರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಇನ್ನು, ಎಫ್ಐಆರ್‌ನಲ್ಲಿ ಜಿಲ್ಲಾ ಕಾರ್ಯದರ್ಶಿ ಮತಿಯಜಗನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬುಷಿ ಆನಂದ್ ಮತ್ತು ರಾಜ್ಯ ಜಂಟಿ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಹೆಸರುಗಳಿವೆ.
ಘಟನೆ ಸಂಬಂಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿರುವ ಟಿವಿಕೆ ಪಕ್ಷ, ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಕೋರಿದೆ. ಮತ್ತೊಂದೆಡೆ ಕಾಲ್ತುಳಿತ ಬಗ್ಗೆ ತನಿಖೆ ನಡೆಸಲು, ಎನ್‌ಡಿಎ ಮೈತ್ರಿಕೂಟದಿಂದ 8 ಸಂಸದರ ನಿಯೋಗವನ್ನು ರಚಿಸಲಾಗಿದೆ. ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ, ಟಿಡಿಪಿ ಸಂಸದ ಮಹೇಶ್ ಕುಮಾರ್, ಬಿಜೆಪಿ ಸಂಸದರಾದ ಹೇಮಮಾಲಿನಿ, ಅಪರಾಜಿತಾ ಸಾರಂಗಿ, ರೇಖಾ ಶರ್ಮಾ, ಬ್ರಿಜ್‌ಲಾಲ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನಿಯೋಗದಲ್ಲಿ ಇದ್ದಾರೆ.




