Tumakuru: ತಿಪಟೂರು: ಆರ್ಥಿಕ ಭದ್ರತೆ ದೃಷ್ಟಿಯಿಂದ ನಿಮ್ಮ ಕುಟುಂಬಕ್ಕೆ ನಮ್ಮ ಯೂನಿಯನ್ ಬ್ಯಾಂಕ್ ರಾಜ್ಯದಲ್ಲಿ ಆಸರೆಯಾಗಿದೆ. ಇಡೀ ರಾಜ್ಯದಲ್ಲಿ ನಮ್ಮ ಬ್ಯಾಂಕ್ ಹೆಚ್ಚಿನ ಮೊತ್ತದ ಅಪಘಾತ ವಿಮೆ ನೀಡಿ, ಜನ ಮೆಚ್ಚುಗೆ ಪಾತ್ರವಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರಿಯ ಕಾರ್ಯಾಲಯ ಬಳ್ಳಾರಿಯ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ದಂಡು ನಾಯಕ್ ತಿಳಿಸಿದರು.
ನಗರದ ಬೆಸ್ಕಾಂ ಡಿವಿಜನ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿವಿಜನ್ ಕಚೇರಿಯಲ್ಲಿ ಹಿರಿಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ದಿವಂಗತ ಸಿ.ಎನ್.ಹರೀಶ್ ಅಪಘಾತದಲ್ಲಿ ಮರಣ ಹೊಂದಿದ್ದು,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿ, ವ್ಯವಹರಿಸುತ್ತಿದ್ದು ಆ ನಿಟ್ಟಿನಲ್ಲಿ ಬ್ಯಾಂಕಿನಿಂದ ಸುಮಾರು ಒಂದು ಕೋಟಿ ಮೊತ್ತದ ಅಪಘಾತ ವಿಮೆ ಪರಿಹಾರ ಚೆಕ್ ಅನ್ನು ದಿ. ಹರೀಶ್ ಪತ್ನಿ ವಿದ್ಯಾಶ್ರೀ ರವರಿಗೆ ವಿತರಿಸಿ ಮಾತನಾಡಿದ ಅವರು, ಈ ಪರಿಹಾರದ ಅಡಿಯಲ್ಲಿ ಅಪಘಾತದಲ್ಲಿ ಮರಣ ಹೊಂದಿದ ಕುಟುಂಬದ ನಿರ್ವಹಣೆಗೆ ಒಂದು ವಾರದೊಳಗೆ 5 ಲಕ್ಷ ರೂ ಪಾವತಿಯಾಗಿದ್ದು, ಒಂದು ಕೋಟಿ, 5 ಲಕ್ಷ ರೂಗಳು ಕುಟುಂಬಕ್ಕೆ ಒಟ್ಟು ಪಾವತಿಯಾಗುತ್ತದೆ.
ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ನಮ್ಮ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅತಿ ಹೆಚ್ಚಿನದಾಗಿ ವ್ಯವಹರಿಸಿ, ಸಿಗುವ ಸೌಲಭ್ಯಗಳನ್ನು ನೌಕರರು ಪಡೆದುಕೊಳ್ಳಬೇಕು ಮತ್ತು ನಮ್ಮಲ್ಲಿ ರೈಲ್ವೆ, ಕೆಪಿಟಿಸಿಎಲ್, ಸಾರಿಗೆ ಮತ್ತು ಸಿ.ಆರ್.ಪಿ ಸೇರಿದಂತೆ ಸರ್ಕಾರಿ ನೌಕರರು ವ್ಯವಹರಿಸುತ್ತಿದ್ದಾರೆ ಹಾಗೂ ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡುತ್ತೇವೆ ಎಂದು ತಿಳಿಸಿದರು.
ತುಮಕೂರು ಬೆಸ್ಕಾಂ ಸೂಪರ್ ಡೆಂಟ್ ಇಂಜಿನಿಯರ್ ನರಸಿಂಹಮೂರ್ತಿ ಮಾತನಾಡಿ, ದೇಶದಲ್ಲಿ ಸೈನಿಕರು ಗಡಿ ಕಾಯುವಂತೆ ನಮ್ಮ ಬೆಸ್ಕಾಂ ನೌಕರರು ತಮ್ಮ ಪ್ರಾಣದ ಹಂಗು ತೊರೆದು, ಕಾರ್ಯನಿರ್ವಹಿಸುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕೆಪಿಟಿಸಿಎಲ್ ಯೂನಿಯನ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡು ವಿಮೆ ಜಾರಿ ಮಾಡಿಕೊಂಡಿರುತ್ತೇವೆ ಆದ್ದರಿಂದ ನೌಕರರು ಹೆಚ್ಚಿನ ರೀತಿಯಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆದು,ಪ್ರಯೋಜನ ಪಡೆಯಬೇಕೆಂದರು.
ಡಿವಿಜನ್ ಕಾರ್ಯನಿರ್ವಾಹಕ ಅಭಿಯಂತರರಾದ ಸೋಮಶೇಖರ ಗೌಡ ಮಾತನಾಡಿ, ನಮ್ಮ ಇಲಾಖೆಯಲ್ಲಿ ದಿನದ 24 ಗಂಟೆಯೂ ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಆಕಸ್ಮಿಕವಾಗಿ ನಮ್ಮ ಇಲಾಖೆಯಲ್ಲಿ ಘಟನೆಗಳು ಸಂಭವಿಸುತ್ತವೆ. ಆದ್ದರಿಂದ ನೌಕರರು ಕಡ್ಡಾಯವಾಗಿ ವಿಮೆ ಜಾರಿ ಮಾಡಿಸಿಕೊಂಡು, ಕುಟುಂಬದ ನಿರ್ವಹಣೆಗೆ ಬೇಕಾದ ಸೌಲಭ್ಯಗಳನ್ನು ಬ್ಯಾಂಕಿನ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಬೆಸ್ಕಾಂ ಜಿಲ್ಲಾ ವೃತ್ತ ಸಂಘಟನಾ ಕಾರ್ಯದರ್ಶಿ ಎನ್.ನರಸಿಂಹಮೂರ್ತಿ ಮಾತನಾಡಿ, ನಮ್ಮ ಬೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುವ ನೌಕರರು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಕುಟುಂಬಗಳ ರಕ್ಷಣೆ ಹಾಗೂ ಮುಂದಿನ ಜೀವನದ ಬಗ್ಗೆ ಆಲೋಚಿಸಿ, ಅಪಘಾತ ವಿಮೆ, ವಾಹನಗಳ ಇನ್ಸೂರೆನ್ಸ್ ಮತ್ತು ಪರವಾನಿಗೆಗಳನ್ನು ಕಡ್ಡಾಯವಾಗಿ ಪಡೆದು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರಿಯ ಕಾರ್ಯಾಲಯ ಬಳ್ಳಾರಿಯ ಚೀಫ್ ಮ್ಯಾನೇಜರ್ ಮೋತಿಲಾಲ್, ತಿಪಟೂರು ಶಾಖಾ ಪ್ರಬಂಧಕ ಕೆ.ಎಸ್.ಆಂಜನೇಯ ರೆಡ್ಡಿ, ಸಹಾಯಕ ಪ್ರಬಂಧಕಿ ಸೀತಾ ಕುಮಾರಿ,ತುಮಕೂರು ಲೆಕ್ಕ ನಿಯಂತ್ರಣ ಅಧಿಕಾರಿ ತಿಪ್ಪೇಸ್ವಾಮಿ,ಕುಣಿಗಲ್ ಇಇ ಪುರುಷೋತ್ತಮ್, ಕುಮಾರಸ್ವಾಮಿ, ಮನೋಹರ್, ಹರಿಹರಪ್ಪ ಮತ್ತು ವಿನಯ್ ಸೇರಿದಂತೆ ಬೆಸ್ಕಾಂ ಹಾಗೂ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

