www.karnatakatv.net : ಬೆಳಗಾವಿ: ಬೆಳಗಾವಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳಗಾವಿ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಈಚೆಗೆ ನಿಧನರಾದ ಚೇತನ ಕುಲಕರ್ಣಿ ಕುಟುಂಬಕ್ಕೆ ಸಹಾಯಧನ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಚೇತನ ಕುಲಕರ್ಣಿ ಕಳೆದ 30 ವರ್ಷಗಳಿಂದ ವಿವಿಧ ರಾಜ್ಯಮಟ್ಟದ ಪತ್ರಿಕೆಗಳ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಒಂದು ವರ್ಷಗಳ ಅನಾರೋಗ್ಯದ ಕಾರಣ ಜು.22 ರಂದು ಅಕಾಲಿಕ ನಿಧನರಾದರು. ಇವರಿಗೆ ಪತ್ನಿ, ತಾಯಿ ಇಬ್ಬರು ಪುತ್ರರನ್ನು ಅಗಲಿದ್ದಾರೆ ಇದು ಕಡುಬಡತನ ಕುಟುಂಬವಾಗಿದ್ದು ಈಗ ಆಧಾರ ಸ್ತಂಭವನ್ನೇ ಕಳೆದುಕೊಂಡು ಸಂಕಷ್ಟದಲ್ಲಿದೆ.

ಹೀಗಾಗಿ ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಯಿಂದ ಮೃತ ಚೇತನ ಕುಟುಂಬಕ್ಕೆ ಧನಸಹಾಯ ನೀಡಬೇಕೆಂದು ಆಗ್ರಹಿಸಲಾಗಿದೆ.
ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವವರು ಅಸಂಘಟಿತ ಕಾರ್ಮಿಕರಾಗಿದ್ದು ಕಾರ್ಮಿಕರಿಗಿಂತಲೂ ಇವರ ಜೀವನ ಕಡೆಯಾಗಿದೆ.
ಜೀವಪಣಕ್ಕಿಟ್ಟು ಸೇವೆ ಸಲ್ಲಿಸುವ ಇವರಿಗೆ ಆರ್ಥಿಕ ಭದ್ರತೆ ಇಲ್ಲದಿರುವುದರಿಂದ ಕುಟುಂಬಸ್ಥರು ಅನೇಕ ಕಷ್ಟದಲ್ಲಿ ಜೀವನ ಕಳೆಯಬೇಕಾಗುತ್ತದೆ. ಆದ್ದರಿಂದ ಇತರೆ ಕಾರ್ಮಿಕರಿಗೆ ಸಿಗುವ ಯಾವುದೇ ಸವಲತ್ತುಗಳು ಪತ್ರಿಕೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಿಗುತ್ತಿಲ್ಲ. ಕಾರಣ ಪತ್ರಿಕೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೆ ಮಾನ್ಯತಾ ಪತ್ರ, ಪಿಂಚಣಿ ಸೌಲಭ್ಯ, ಉಚಿತ ನಿವೇಶನ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾಶಿವ ಸಂಕಪ್ಪಗೊಳ, ಉಪಾಧ್ಯಕ್ಷರಾದ ಏಕನಾಥ ಅಗಸಿಮನಿ ಸದಸ್ಯರಾದ ಅರುಣ ಎಳ್ಳೂರಕರ, ವಿಜಯ ಮೋಹಿತೆ, ಜಗದೀಶ ದೊಡ್ಡಿಕರ, ಮಂಜುನಾಥ ಕೋಳಿಗುಡ್ಡ, ಕೃಷ್ಣಾ ಕಾಂಬಳೆ, ವಿಶ್ವನಾಥ ದೇಸಾಯಿ, ಗಜಾನನ ಮುಂಚಂಡಿಕರ ಇತರರು ಇದ್ದರು.

