Friday, November 28, 2025

Latest Posts

ನಾನು ಆತುರ ಪಡುತ್ತಿಲ್ಲ ಎಂದ DK – ಕಾಂಗ್ರೆಸ್ ನಲ್ಲಿ ಸೀಕ್ರೇಟ್ ಮೀಟಿಂಗ್ಸ್

- Advertisement -

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿದ ನಂತರ ಅಧಿಕಾರ ಹಂಚಿಕೆಯ ಗೊಂದಲವನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಖರ್ಗೆ ಅವರ ಈ ಹೇಳಿಕೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ಕರೆ ನೀಡಿದರೆ ಸಭೆಗೆ ತೆರಳುವ ಸಿದ್ಧತೆಯನ್ನು ವ್ಯಕ್ತಪಡಿಸಿದ್ದರು, ಆದರೆ ಇದರ ನಡುವೆಯೇ ಬೆಂಗಳೂರಿನಲ್ಲೂ ಹಲವು ಗುಪ್ತ ಸಭೆಗಳು ನಡೆಯುತ್ತಿದ್ದು, ಹೈಕಮಾಂಡ್‌ನ ನಿರ್ಧಾರಕ್ಕಾಗಿ ಪಕ್ಷದ ಪ್ರಮುಖ ನಾಯಕರು ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಯಕತ್ವ ಬದಲಾವಣೆಯ ಕುರಿತ ಯಾವುದೇ ಮಾತುಕತೆ ನಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಶಿವಕುಮಾರ್ ಸ್ಪಷ್ಟಪಡಿಸಿದ್ದು, ಮುಂಬೈಗೆ ಖಾಸಗಿ ಕೆಲಸಕ್ಕಾಗಿ ತೆರಳಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೈಕಮಾಂಡ್ ಅಥವಾ ಇತರ ನಾಯಕರನ್ನು ತಾವು ಇನ್ನೂ ಭೇಟಿ ಮಾಡಿಲ್ಲ, ಈ ಸಂಬಂಧ ಚರ್ಚೆಗಳು ನಡೆದರೆ ಅವು ಬೆಂಗಳೂರು ಅಥವಾ ನವದೆಹಲಿಯಲ್ಲಿ ನಡೆಯುತ್ತವೆ, ಮುಂಬೈಯಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ X ಖಾತೆಯಲ್ಲಿ “Word Power is World Power” ಎಂದು ಮಾಡಿದ ಪೋಸ್ಟ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ವ್ಯಕ್ತಿ ಹೇಳಿದ ಮಾತನ್ನು ಉಳಿಸಿಕೊಳ್ಳುವುದೇ ನಿಜವಾದ ಶಕ್ತಿ, ಅದು ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ, ನಾನು ಸೇರಿದಂತೆ ಯಾವ ನಾಯಕರಾಗಲೀ ಎಲ್ಲರೂ ಹೇಳಿದಂತೆ ನಡೆದುಕೊಳ್ಳಬೇಕು, ಈ ಪೋಸ್ಟ್ ಯಾರನ್ನೂ ಗುರಿಯಾಗಿಸಿ ಮಾಡಿರುವುದಲ್ಲ ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ಒಂದು ಪದವು ಜನರಿಗೆ ಜಗತ್ತನ್ನು ಉತ್ತಮಗೊಳಿಸದ ಹೊರತು ಅದು ಶಕ್ತಿಯಲ್ಲ, ಕರ್ನಾಟಕದ ಜನರು ನೀಡಿರುವ ಆದೇಶವು ಕ್ಷಣಿಕವಲ್ಲ, ಐದು ವರ್ಷಗಳ ಜವಾಬ್ದಾರಿಯಾಗಿದೆ ಎಂದು ತಮ್ಮ ಅಧಿಕೃತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ಕೆಲವು ಶಾಸಕರೊಂದಿಗೆ ಶಾಸಕರ ಭವನದಲ್ಲಿ ಸಭೆ ನಡೆಸಿದರೆ, ನಂತರ ಸಚಿವ ಕೆ.ಎಚ್. ಮುನಿಯಪ್ಪ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ವೆಂಕಟರಮಣಯ್ಯ ಮತ್ತು ರಾಜು ಗೌಡ ಅವರೊಂದಿಗೆ ಉಪಹಾರ ಕೂಟ ಸಭೆ ನಡೆಸಿ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಇದೇ ದಿನ ಬೆಳಿಗ್ಗೆ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸಿ ಮಹತ್ವದ ಸಭೆ ನಡೆಸಿದ್ದು, ಸುದ್ದಿಗಾರರಿಗೆ ಮಾತನಾಡಿದ ಅವರು ನಾಯಕತ್ವ ವಿಚಾರವಾಗಿ ಹೈಕಮಾಂಡ್ ಸಭೆ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿದರೆ ಸಭೆ ನಡೆಯುತ್ತದೆ, ಆದರೆ ಅಧಿಕೃತ ಆಹ್ವಾನ ಇದುವರೆಗೂ ಯಾರಿಗೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಎಲ್ಲರ ಗಮನವೂ ಈಗ ಪಕ್ಷದ ಹೈಕಮಾಂಡ್‌ನ ನಿರ್ಧಾರಕ್ಕೆ ಕೇಂದ್ರೀಕೃತವಾಗಿದ್ದು, ಸಿಎಂ–ಡಿಸಿಎಂ ನಾಯಕತ್ವದ ಚರ್ಚೆಯ ಅಂತಿಮ ತೀರ್ಮಾನಕ್ಕಾಗಿ ರಾಜ್ಯದ ರಾಜಕೀಯ ವಲಯ ಕಾಯುತ್ತಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss