ಇಡಿಯಿಂದ ಕಾಂಗ್ರೆಸ್ ಅಧಿನಾಯಕಿಗೆ ಕಿರುಕುಳ ಖಂಡಿಸಿ ಜು.26ರಂದು ಮೌನ ಸತ್ಯಾಗ್ರಾಹ – ಡಿಕೆ ಶಿವಕುಮಾರ್ ಘೋಷಣೆ

ಬೆಂಗಳೂರು: ‘ಇದೇ 26 ರಂದು ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಪ್ರಕರಣದಲ್ಲಿ ನನ್ನ ತಾಯಿಗೂ ಇದೇ ರೀತಿ ಕಿರುಕುಳ ನೀಡಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ನ್ಯಾಯಾಲಯದ ಮೊರೆ ಹೋಗಿದ್ದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಆದರೂ ಕಿರುಕುಳ ನಿಲ್ಲುತ್ತಿಲ್ಲ. ಹೀಗಾಗಿ ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ರಾಜ್ಯದ ಎಲ್ಲ ನಾಯಕರು, ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಪೊರೇಟರ್, ಮಾಜಿ ಕಾರ್ಪೊರೇಟರ್, ಪಕ್ಷದ ಪದಾಧಿಕಾರಿಗಳು ಎಲ್ಲರೂ 26 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮೌನ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.

ಚಲುವರಾಯಸ್ವಾಮಿ, ಬಾಲಕೃಷ್ಣ ಅವರ ಜತೆ ನಿನ್ನೆ ರಾತ್ರಿ ಸಮಾಲೋಚನೆ ಕುರಿತ ಪ್ರಶ್ನೆಗೆ, ಭಾರತ ಜೋಡೋ ಪಾದಯಾತ್ರೆ ಚಾಮರಾಜನಗರ, ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮೇಲುಕೋಟೆ, ಪಾಂಡವಪುರ, ಮಾರ್ಗವಾಗಿ ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಇದಕ್ಕೆ ಸಂಬಂಧಿಸಿದ ತಯಾರಿ ಕುರಿತು ಚರ್ಚೆ ಮಾಡಿದ್ದೇವೆ.

ಪಕ್ಷದ ಸಂಘಟನೆ ವಿಚಾರ ಹೊರತು ಪಡಿಸಿ ಬೇರೆ ವಿಚಾರವಾಗಿ ಯಾವುದೇ ನಾಯಕರು ನನ್ನ ಬಳಿ ಚರ್ಚೆ ಮಾಡಿಲ್ಲ, ಮಾಡಲು ಅವಕಾಶ ನೀಡುವುದಿಲ್ಲ.’

ಕಾಂಗ್ರೆಸ್ ಜಗಳ ಬೀದಿಗೆ ಬಂದಿದೆ. ಒಂದು ಹುದ್ದೆಗೆ ನಾಲ್ಕು ಜನ ಕಿತ್ತಾಡುತ್ತಿದ್ದಾರೆ ಎಂಬ ಸಚಿವ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಬಹಳ ಸಂತೋಷ. ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂಬ ಸತ್ಯವನ್ನು ಅವರು ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ತಿಳಿಸಿದರು.

ಬಿಜೆಪಿ ನೋಡಿ ಕಾಂಗ್ರೆಸ್ ಶಿಸ್ತು ಕಲಿಯಬೇಕು ಎಂಬ ಹೇಳಿಕೆ ಕುರಿತ ಪ್ರಶ್ನೆಗೆ, ‘ ಅವರನ್ನು ನೋಡಿ ಭ್ರಷ್ಟಾಚಾರ, ಲೂಟಿ ಮಾಡೋದನ್ನು ಕಲಿಯಬೇಕಾ? ಅಯ್ಯೋ ಅವರ ಪಕ್ಷ, ಅಲ್ಲಿರುವ ಕೊಳಕು, ಅವರ ನಾಯಕರನ್ನು ಅವರು ಅರಗಿಸಿಕೊಳ್ಳಲು ಸಾಧ್ಯವಿದೆಯೇ ಎಂದು ಅವರ ಕಾರ್ಯಕರ್ತರನ್ನೆ ಕೇಳಿ ‘ ಎಂದು ತಿಳಿಸಿದರು.

About The Author