ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತು ಮತ್ತೆ ರಾಜಕೀಯ ಚರ್ಚೆ ಶುರುವಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಸಿಎಂ ಸ್ಥಾನ ಡಿ.ಕೆ. ಶಿವಕುಮಾರ್ ಅವರಿಗೆ ನ್ಯಾಯಯುತವಾಗಿ ಸಿಗಬೇಕಾಗಿತ್ತು. ಆದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ರಾಜಕೀಯವಾಗಿ ಬಲಹೀನರಾಗಿದ್ದಾರೆ. ಎಲ್ಲರಿಗೂ ಹೆದರಿಕೊಳ್ಳುವ ಹೈಕಮಾಂಡ್‌ನ ಕಾರಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು ಎಂದು ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್‌ಗೆ ಸೀಟು ಬಿಟ್ಟುಕೊಡುತ್ತಾರೆ ಎಂಬ ಭರವಸೆ ಇಲ್ಲ. ದೇವೇಗೌಡರ ರಾಜಕೀಯದಲ್ಲಿ ಪಳಗಿದ ಸಿದ್ದರಾಮಯ್ಯ ಅಭಿವೃದ್ಧಿ ಕೆಲಸ ಕಲಿತಿದ್ದರೆ ರಾಜ್ಯಕ್ಕೆ ಲಾಭವಾಗುತ್ತಿತ್ತು, ಆದರೆ ಅವರು ಕಲಿತದ್ದು ಪಾಲಿಟಿಕ್ಸ್ ಮಾತ್ರ. ಒಳ್ಳೆಯ ಆಡಳಿತ ನೀಡಿದ್ದರೆ ಜನರು ಸಿದ್ದರಾಮಯ್ಯ ಮುಂದುವರಿಯಲಿ ಎಂದು ಹೇಳುತ್ತಿದ್ದರು. ಕೆಟ್ಟ ಆಡಳಿತದ ನಡುವೆಯೂ ಸೀಟು ಬಿಟ್ಟುಕೊಡುವ ಮನಸ್ಸಿಲ್ಲ ಎಂದು ಟೀಕಿಸಿದರು.
2013ರಲ್ಲಿ ಡಾ. ಜಿ. ಪರಮೇಶ್ವರ್ KPCC ಅಧ್ಯಕ್ಷರಾಗಿದ್ದಾಗ, ಅವರಿಗೆ ಅವಕಾಶ ಸಿಗಬಾರದು ಎಂದು ಸಿದ್ದರಾಮಯ್ಯ ಸ್ವಜಾತಿಯವರನ್ನು ಸೋಲಿಸಿ ಸಿಎಂ ಸ್ಥಾನ ಪಡೆದರು. 2023ರಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಡಿಕೆಶಿ ಹುಟ್ಟು ಹೋರಾಟಗಾರರು, ರಾಜಕೀಯದಲ್ಲಿ ಸಮರ್ಥರು ಎಂದರು. ಜೊತೆಗೆ, ನವೆಂಬರ್ ಕ್ರಾಂತಿ ಡಿಸೆಂಬರ್‌ನಲ್ಲಿ ಬ್ರಾಂತಿ ಆಗಲಿದೆ. ಸತೀಶ್ ಜಾರಕಿಹೋಳಿಯನ್ನು ಎತ್ತಿ ಕಟ್ಟುವುದು, ಶಾಸಕರನ್ನು ಹಿಡಿದುಕೊಳ್ಳುವುದು ಇಷ್ಟೇ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಆಡಳಿತ ವಿಫಲವಾಗಿದೆ ಎಂದು ಪ್ರಹಾರ ಮಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಆಡಳಿತ ಹೆಣ ಹೊರುತ್ತಿದ್ದಾರೆ. ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ₹38 ಸಾವಿರ ಕೋಟಿ ಮದ್ಯದಿಂದ ಬರುತ್ತಿದೆ—ಆದರೂ ರೈತರಿಗೆ ದ್ರೋಹ. ಭತ್ತ ಖರೀದಿ ಕೇಂದ್ರಗಳು ತೆರೆಯಿಲ್ಲ. ಪಂಚ ಗ್ಯಾರಂಟಿಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಸರ್ಕಾರ ಸಾಲದ ಹೊರೆ ಹೆಚ್ಚಿಸಿದೆ” ಎಂದು ಆರೋಪಿಸಿದರು. ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ, ರಾಜ್ಯದಾದ್ಯಂತ ವಿಜಯೇಂದ್ರ ಮತ್ತು ಆರ್. ಅಶೋಕ್ ಮುಖೇನ ಹೋರಾಟಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

