ಸಿಎಂ ಕುರ್ಚಿ ಕನಸಿನ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್, ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಸೌಥ್ ಕಾನ್‌ಕ್ಲೇವ್‌ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದು, ವಿಶೇಷ ಸಂದರ್ಶನ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮದ ಮುಂದೆ ಮಾತನಾಡಿರುವ ಡಿಕೆಶಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರ 2.5 ವರ್ಷ ಪೂರ್ಣಗೊಂಡ ಬಳಿಕ, ನವೆಂಬರ್‌ನಲ್ಲಿ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರಾ? ಇನ್ನೆರಡು ತಿಂಗಳು ಬಳಿಕ ಕಾರ್ಯಕ್ರಮ ಆಗಿದ್ರೆ, ನಿಮ್ಮನ್ನು ಸಿಎಂ ಅಂತಾ ಕರೆಯಬೇಕಿತ್ತಲ್ವಾ? ಹೀಗಂತ ಖ್ಯಾತ ಪತ್ರಕರ್ತ ರಾಜದೀಪ್ ಸರ್‌ದೇಸಾಯಿ ಅವರು ನೇರವಾಗೇ ಪ್ರಶ್ನೆ ಕೇಳಿದ್ರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ.
ಭರವಸೆ ಇಲ್ಲದೆ ಜೀವನವೇ ಇಲ್ಲ. ಪ್ರಪಂಚದಲ್ಲಿ ಪ್ರತಿಯೊಬ್ಬರು ಭರವಸೆಯೊಂದಿಗೆ ಜೀವನ ಮಾಡ್ತಾರೆ. ತುಂಬಾ ಸಮಯದಿಂದ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಸಿದ್ದರಾಮಯ್ಯ ಮತ್ತು ನಾನು ಜೊತೆಯಾಗಿದ್ದೇವೆ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಾವಿಬ್ಬರು ನಡೆಯುತ್ತೇವೆ ಮತ್ತು ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ಒಳ್ಳೆಯ ಆಡಳಿತ ಕೊಡುವುದೇ ನಮ್ಮ ಗುರಿ. ಗಾಂಧಿ ಕುಟುಂಬಕ್ಕೆ ನನ್ನ ಪ್ರಮಾಣಿಕತೆ ಬೇರೆ. ಗಾಂಧಿ ಕುಟುಂಬ ದೇಶ ಮತ್ತು ಪಕ್ಷವನ್ನು ಒಗ್ಗಟ್ಟಿನಿಂದ ಇಟ್ಟಿದೆ.
ಮುಖ್ಯಮಂತ್ರಿ ಸ್ಥಾನ ಮಹತ್ವದ್ದಲ್ಲ. ನಾನು ಸ್ವಾರ್ಥಿ ಆಗೋದು ಬೇಕಿಲ್ಲ. ಅಧಿಕಾರ ಬಂದೇ ಬರುತ್ತೆ. ನನ್ನ ಬಿಟ್ಟು ಹೋಗೋದಕ್ಕೆ ಸಾಧ್ಯವಿಲ್ಲ. ಕಠಿಣ ಪರಿಶ್ರಮ ಎಲ್ಲವನ್ನೂ ಕೊಡುತ್ತದೆ. ನನಗೆ ಆ ನಂಬಿಕೆ ಇದೆ. ಕೆಲವರು ಕೆಲವು ಕಾಂಟ್ರವರ್ಸಿಗಳನ್ನು ಕ್ರಿಯೇಟ್ ಮಾಡ್ತಾರೆ. ಬಿಜೆಪಿಗೆ ನನ್ನನ್ನು ಎಳೆದು ತರುತ್ತಾರೆ. ಆದ್ರೆ, ನನಗೆ ಅಹಂಕಾರ ಮುಖ್ಯವಲ್ಲ ಅಂತಾ, ಡಿಕೆಶಿ ಹೇಳಿದ್ರು.
ಸೂರ್ಯ ಮುಳುಗುತ್ತಾನೆ. ಸೂರ್ಯ ಹುಟ್ಟುತ್ತಾನೆ. ಎಲ್ಲರಿಗೂ ಸಮಯ ಬಂದೇ ಬರುತ್ತದೆ. ರಾಷ್ಟ್ರ ರಾಜಕೀಯದ ಬಗ್ಗೆ ಹೆಚ್ಚು ಮಾತನಾಡೋಕೆ ಇಷ್ಟ ಪಡುವುದಿಲ್ಲ. ನನಗೆ ಬಹಳ ವಿಶ್ವಾಸ ಇದೆ. ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿ ಆಗೇ ಆಗ್ತಾರೆ. ನಾವು ಇದೇ ಹಾದಿಯಲ್ಲಿ ಕೆಲಸ ಮಾಡ್ತಿದ್ದೇವೆ. ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. 2028ಕ್ಕೆ ಕಾಂಗ್ರೆಸ್ ಸರ್ಕಾರವೇ ಇರುತ್ತದೆ ಅಂತಾ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.