Wednesday, December 4, 2024

Latest Posts

ಅಧ್ಯಕ್ಷ ಸ್ಥಾನದ ದುರಾಸೆ ಇಲ್ಲ, ಯತ್ನಾಳ್-ಡಿಕೆಶಿ ಬಾಂಧವ್ಯ: ಡಿ.ಕೆ. ಸುರೇಶ್

- Advertisement -

“ಸದ್ಯಕ್ಕೆ ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ನನ್ನಲ್ಲಿಲ್ಲ” – ಡಿ.ಕೆ. ಸುರೇಶ್, ಮಾಜಿ ಸಂಸದ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿಲ್ಲ ಅಂತ ಮಾಜಿ ಸಂಶದ ಡಿಕೆ ಸುರೇಶ್ ಸ್ಪಷ್ಟಪಡಿಸಿದ್ದಾರೆ. “ಒಂದಷ್ಟು ಜನರು ನನ್ನನ್ನು ಖುಷಿಪಡಿಸಲು, ಮತ್ತೆ ಕೆಲವರು ಇನ್ನೊಬ್ಬರನ್ನು ಖುಷಿ ಪಡಿಸಲು ಹಾಗೂ ತಮ್ಮ ಅನುಕೂಲಕ್ಕಾಗಿ ಈ ರೀತಿ ಹೆಸರುಗಳನ್ನು ಹೇಳುತ್ತಿರುತ್ತಾರೆ. ನಾನು ಪ್ರಸ್ತುತ ವಿಶ್ರಾಂತಿಯಲ್ಲಿದ್ದೇನೆ. ಜನರು ಕೊಟ್ಟ ತೀರ್ಪನ್ನು ಪ್ರಸಾದ ಎಂದು ಸ್ವೀಕರಿಸಿ ಕೆಲಸ ಮಾಡುವವನು ನಾನು. ಯಾವುದೇ ಸ್ಥಾನ ಸಿಗಬೇಕು ಅಂತಾದರೆ ಸಿಕ್ಕೇ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ಯಾವುದೂ ಇಲ್ಲಿ ಸ್ವಂತ ಸ್ವತ್ತಲ್ಲ. ಸಾರ್ವಜನಿಕವಾದ ಹುದ್ದೆಗಳಿವು” ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಯಾರಿಗೆ ಜವಾಬ್ದಾರಿ ನೀಡುತ್ತಾರೋ ಅವರಿಗೆ ಸಹಕಾರ:

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. “ಸರ್ವಪಕ್ಷಗಳ ಹಿರಿಯ ನಾಯಕರಾದ ರಾಜಣ್ಣ ಅವರು ಹೆಚ್ಚು ಶಕ್ತಿ ಇರುವ ನಾಯಕರು. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಉತ್ತಮವಾಗಿ ಸಂಘಟನೆಯಾಗುತ್ತದೆ ಎನ್ನುವ ವಿಶ್ವಾಸ ಅವರಿಗಿದೆ. ಅವರಿಗೆ ಜನತಾದಳ, ಬಿಜೆಪಿಯವರ ಜೊತೆ ಒಳ್ಳೆ ಸಖ್ಯವನ್ನಿಟ್ಟುಕೊಂಡಿದ್ದಾರೆ. ಅಲ್ಲಿಂದ ಒಂದಷ್ಟು ಜನರನ್ನು ಕರೆದುಕೊಂಡು ಬರಬಹುದು ಎನಿಸುತ್ತದೆ. ಹೀಗಾಗಿ ಅವರು ಪಕ್ಷದ ನೇತೃತ್ವವಹಿಸಲು ತುಡಿತದಲ್ಲಿದ್ದಾರೆ. ಅವರಿಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಾವು ಸಹಕಾರ ನೀಡಲು ಸಿದ್ಧ” ಎಂದರು

ಕಾಂಗ್ರೆಸ್ ಶಾಸಕರು ಜನರ ಋಣ ತೀರಿಸುವಂತೆ ಕೆಲಸ ಮಾಡಲು ಮನವಿ:

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಮನಗರದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ರು. “ಅವರು ಉತ್ತಮವಾದ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸವಾಲು ಹಾಗೂ ಪ್ರತಿಷ್ಟೆಯಾಗಿ ಸ್ವೀಕರಿಸಿ, ನಾಲ್ಕು ಶಾಸಕರು ಜಿಲ್ಲೆಯ ಜನರ ಋಣ ತೀರಿಸುವಂತೆ ಕೆಲಸ ಮಾಡಬೇಕು ಎಂದು ವಿನಯಪೂರ್ವಕ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.

ಇನ್ನು ಚನ್ನಪಟ್ಟಣದಲ್ಲಿ ಡಿ.14ರಂದು ಕೃತಜ್ಞತಾ ಸಮಾರಂಭವನ್ನು ಇಟ್ಟುಕೊಂಡಿರೋದಾಗಿ ಡಿಕೆಸು ತಿಳಿಸಿದ್ರು. ಸಿಎಂ ಹಾಗೂ ಡಿಸಿಎಂ ಕೂಡ ಈ ದಿನಾಂಕ ಕೊಟ್ಟಿದ್ದಾರೆ. ಆದರೆ ಕೆಲವು ಶಾಸಕರು ಅಧಿವೇಶನ ಮುಕ್ತಾಯದ ಬಳಿಕ ಮಾಡಿ ಎಂದು ಕೇಳುತ್ತಿದ್ದು, ಅಧಿವೇಶನದ ಬಳಿಕ ಭಾನುವಾರದಂದು ಈ ಸಮಾರಂಭ ಮಾಡುತ್ತೇವೆ” ಎಂದರು

ಸ್ವಾಮೀಜಿಗಳ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲು ಮನವಿ:

ಚಂದ್ರಶೇಖರ ಸ್ವಾಮೀಜಿಗಳ ವಿರುದ್ಧದ ಕೇಸ್ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ರು. “ಸ್ವಾಮೀಜಿಗಳ ಮೇಲೆ ದ್ವೇಷದ ರಾಜಕಾರಣ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ ಪರಮಪೂಜ್ಯ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಾವು ಸಂವಿಧಾನದ ಅಡಿಯಲ್ಲಿ ಪ್ರಜೆಯಾಗಿ ಬದುಕುತ್ತಿದ್ದು, ಸಂವಿಧಾನ ನಮಗೆ ಮತದಾನ ಸೇರಿದಂತೆ ಅನೇಕ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೆಲವರು ಆಗಾಗ್ಗೆ ಏನೇನೋ ಹೇಳಿಕೆ ನೀಡುತ್ತಿರುತ್ತಾರೆ. ಪರಮಪೂಜ್ಯರು ಈಗಾಗಲೇ ಸ್ಪಷ್ಟನೆ ನೀಡಿ, ತಮ್ಮ ಮಾತು ಸಾಂದರ್ಭಿಕವಾಗಿ ತಪ್ಪು ಎಂದಿದ್ದಾರೆ. ಇಂತಹ ಹೇಳಿಕೆ ಬಂದಾಗ ಸರ್ಕಾರ ದೂರು ದಾಖಲಿಸಿಕೊಳ್ಳುವುದು ಸಹಜ. ಸ್ವಾಮೀಜಿಗಳು ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಗೃಹಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಬಿಜೆಪಿ ಹೋರಾಟ ಯತ್ನಾಳ್ ವಿರುದ್ಧವೋ, ನಮ್ಮ ವಿರುದ್ಧವೋ:
“ಬಿಜೆಪಿಯವರು ತಮ್ಮ ಹೋರಾಟವನ್ನು ಯತ್ನಾಳ್ ವಿರುದ್ಧ ಹೋರಾಟ ಮಾಡುತ್ತಾರೋ, ನಮ್ಮ ವಿರುದ್ಧ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕಡೆ ಮುನ್ನಡೆಯುತ್ತಿದೆ. ವಿರೋಧ ಪಕ್ಷಗಳು ಜನರ ಕಷ್ಟ ಅರಿತು ಅಭಿವೃದ್ಧಿ ಕಡೆಗೆ ಆದ್ಯತೆ ನೀಡಬೇಕು. ಸಕಾರಾತ್ಮಕ ನಿಲುವು ನೀಡಬೇಕು” ಎಂದು ಡಿಕೆಸುರೇಶ್ ಹೇಳಿದ್ರು

ಇನ್ನು ಯತ್ನಾಳ್ ಅವರಿಗೂ ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ. ಅವರು ಕೂಡ ಆತ್ಮೀಯರು. ಅವರು ಕೂಡ ಶಿವಕುಮಾರ್ ಅವರ ಜತೆಗೆ ಉಭಯಕುಶಲೋಪರಿ ಚರ್ಚೆ ಮಾಡುತ್ತಿರುತ್ತಾರೆ. ಅಂತ ಡಿಕೆಸು ಹೇಳಿದ್ರು

- Advertisement -

Latest Posts

Don't Miss