ದೆಹಲಿಯಲ್ಲಿ ತಮಿಳುನಾಡು ಸಿಎಂ ಜತೆ ಡಿಕೆಶಿ ಚರ್ಚೆ: ಮಾತುಕತೆ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದೇನು..?

Political News: ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಕಾಂಗ್ರೆಸ್ ನಾಯಕರು ಸೇರಿ, ಕಾಂಗ್ರೆಸ್ ಬೆಂಬಲಿತ ನಾಯಕರಿಗೂ ಆಹ್ವಾನ ನೀಡಲಾಗಿತ್ತು. ಹೀಗಾಗಿ ಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಲ್ಲದೇ ಕಾಂಗ್ರೆಸ್ ಬೆಂಬಲಿತ ಟಿಎಂಕೆ ಪಕ್ಷದ ನಾಯಕರು, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸಿಎಂ ಡಿಕೆಶಿ ವಿಜಯ್ ಜತೆ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ. ವಿಜಯ್ ಅವರ ಜತೆ ನಡೆಸಿರುವ ಚರ್ಚೆ ಬಗ್ಗೆ ನಾನು ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ.

ಇನ್ನು ಮೇಕೆದಾಟು ಯೋಜನೆ, ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಂ ಡಿಕೆಶಿ, ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿದ್ದು, 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಲಾಗಿದೆ. ಮತ್ತು ಆದೇಶ ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇನ್ನು ಮೇಕೆದಾಟು ಯೋಜನೆ ಬಗ್ಗೆ ವಿರೋಧ ಪಕ್ಷಗಳು ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಇದು ಜ್ಞಾನವಿಲ್ಲದೇ ಹೇಳಿಕೆ ನೀಡುವ ವಿಚಾರವಲ್ಲ. ಈ ಯೋಜನೆಗೆ ಚಾಲನೆ ಸಿಕ್ಕರೆ, ಬೆಂಗಳೂರು, ಮೈಸೂರು, ಹಾಸನ, ತಮಿಳುನಾಡಿಗೂ ಸಹಾಯವಾಗಲಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

About The Author