ಬೆಂಗಳೂರು : ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಡಿಎಂಕೆ ಬುಧವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಚುನಾವಣೆ ನಡೆಯಲಿರುವ ನಾಲ್ಕು ಸ್ಥಾನಗಳಲ್ಲಿ, ತಮಿಳುನಾಡಿನ ಆಡಳಿತ ಪಕ್ಷವು ಮೂವರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ಅದರಲ್ಲಿ ಒಂದು ಸ್ಥಾನವನ್ನು ತನ್ನ ಮಿತ್ರ ಪಕ್ಷವಾದ ಮಕ್ಕಳ್ ನೀಧಿ ಮಯ್ಯಮ್ ಎಂಎನ್‌ಎಂ ಗೆ ಹಂಚಿಕೆ ಮಾಡಿದ್ದು, ಈ ಮೂಲಕ ನಟ-ರಾಜಕಾರಣಿ ಕಮಲ್ ಹಾಸನ್ ಅವರ ಸಂಸತ್ತಿನ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ.
ಕಮಲ್ ಹಾಸನ್‌ಗೆ ರಾಜ್ಯಸಭೆಗೆ ಡಿಎಂಕೆ ದಾರಿ..
ಇನ್ನೂ ಡಿಎಂಕೆ ಪಕ್ಷದ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೀಟು ಹಂಚಿಕೆಯ ವಿಚಾರದ ಬಗ್ಗೆ ಎಂಎನ್ಎಂ ಜೊತೆ ಈ ಹಿಂದೆ ಒಪ್ಪಿಕೊಂಡಂತೆಯೇ ಅವಕಾಶ ಮಾಡಲಾಗಿದೆ ಎಂದು ಹೇಳಿದ್ದಾರೆ. ಡಿಎಂಕೆ ನಾಮನಿರ್ದೇಶಿತರಲ್ಲಿ ಹಾಲಿ ಸಂಸದ ಮತ್ತು ಹಿರಿಯ ವಕೀಲ ಪಿ ವಿಲ್ಸನ್, ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಎಸ್.ಆರ್. ಶಿವಲಿಂಗಂ ಮತ್ತು ಪಕ್ಷದ ವಕ್ತಾರ ಹಾಗೂ ಖ್ಯಾತ ಬರಹಗಾರ, ಕವಿ ಸಲ್ಮಾ ಎಂದೇ ಜನಪ್ರಿಯರಾಗಿರುವ ರೊಕ್ಕಯ್ಯ ಮಲಿಕ್ ಸೇರಿದ್ದಾರೆ.
ಪ್ರಮುಖವಾಗಿ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ವಿಲ್ಸನ್ 2019 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಶಿವಲಿಂಗಂ ಈ ಹಿಂದೆ 1989 ಮತ್ತು 1996 ರಲ್ಲಿ ಡಿಎಂಕೆ ಶಾಸಕರಾಗಿ ಸೇವೆ ಸಲ್ಲಿಸಿದ್ದರೆ, ಪಕ್ಷದ ದೀರ್ಘಕಾಲದ ಸದಸ್ಯೆಯಾಗಿದ್ದ ಸಲ್ಮಾ 2006 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಇವರನ್ನೆಲ್ಲ ನಾಮ ನಿರ್ದೇಶನ ಮಾಡುವ ಮೂಲಕ ಡಿಎಂಕೆ ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡುವ ಕಾರ್ಯಕ್ಕೆ ಮುಂದಾಗಿದೆ.
ಜಾತಿಯ ಸಮೀಕರಣಕ್ಕೆ ಮುಂದಾದ ಸ್ಟಾಲಿನ್..
ಸಲ್ಮಾ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ, ವಿಲ್ಸನ್ ಕ್ರಿಶ್ಚಿಯನ್ ಮತ್ತು ಶಿವಲಿಂಗಂ ಹಿಂದೂ ಸಮುದಾಯವನ್ನು ಪ್ರತಿನಿಧಿಸಲಿರುವುದು ಡಿಎಂಕೆಯ ಸಮಗ್ರ ರಾಜಕೀಯ ಸಂದೇಶವನ್ನು ಒತ್ತಿಹೇಳುತ್ತದೆ. ಬುಧವಾರ ನಡೆದ ಪಕ್ಷದ ಕಾರ್ಯಕಾರಿ ಮತ್ತು ಆಡಳಿತ ಸಮಿತಿಗಳ ಸಭೆಗಳ ನಂತರ, ಎಂಎನ್‌ಎಂ ಕಮಲ್ ಹಾಸನ್ ಅವರನ್ನು ತನ್ನ ಅಭ್ಯರ್ಥಿಯಾಗಿ ಡಿಎಂಕೆ ಘೋಷಿಸುವ ಮೂಲಕ ಮೈತ್ರಿ ಧರ್ಮ ಪಾಲನೆಯತ್ತ ಹೆಜ್ಜೆ ಇಟ್ಟಿದೆ.
ಶೀಘ್ರದಲ್ಲೇ ರಾಜ್ಯಸಭಾ ಚುನಾವಣೆ..!
ಅಲ್ಲದೆ ಮುಖ್ಯವಾಗಿ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಡಿಎಂಕೆ ಹಾಗೂ ಎಂಎನ್‌ಎಂ ಉಭಯ ಪಕ್ಷಗಳು ಮಾಡಿಕೊಂಡ ಒಪ್ಪಂದದ ಭಾಗವಾಗಿ ಅವರ ನಾಮನಿರ್ದೇಶನ ಮಾಡಲಾಗಿದೆ. ಡಿಎಂಕೆಯ ಸಂಸದರಾದ ಎಂ. ಷಣ್ಮುಗಂ, ಎಂ. ಮೊಹಮ್ಮದ್ ಅಬ್ದುಲ್ಲಾ ಮತ್ತು ಪಿ. ವಿಲ್ಸನ್ ಮತ್ತು ಎಂಡಿಎಂಕೆಯ ವೈಕೊ ಅವರ ಅವಧಿ ಮುಗಿಯುತ್ತಿದ್ದಂತೆ ಮುಂಬರುವ ರಾಜ್ಯಸಭಾ ಚುನಾವಣೆ ಅನಿವಾರ್ಯವಾಗಿದೆ. ಪಿಎಂಕೆ ನಾಯಕ ಮತ್ತು ನಿರ್ಗಮಿತ ಸಂಸದ ಅನ್ಬುಮಣಿ ರಾಮದಾಸ್ ಅವರ ಅಧಿಕಾರಾವಧಿಯೂ ಕೊನೆಗೊಳ್ಳಲಿದೆ.
ಜೂನ್ 19 ರಂದು ಚುನಾವಣೆ , ಅಂದೇ ರಿಸಲ್ಟ್..
ವಿಧಾನಸಭೆಯಲ್ಲಿ ತನ್ನ ಪ್ರಸ್ತುತ ಬಲದೊಂದಿಗೆ ಎರಡು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿರುವ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೆ ರಾಜ್ಯಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಜೂನ್ 9 ರಂದು ಮುಕ್ತಾಯಗೊಳ್ಳಲಿದ್ದು, ಮರುದಿನ ಪರಿಶೀಲನೆ ನಡೆಯಲಿದೆ. ಜೂನ್ 19 ರಂದು ಮತದಾನ ನಡೆಯಲಿದ್ದು, ಅಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಇನ್ನೂ ಕಮಲ್ ಹಾಸನ್ ನಾಮ ನಿರ್ದೇಶನದಿಂದ ತಮಿಳುನಾಡು ರಾಜಕೀಯದಲ್ಲಿ ಹೊಸ ಹೊಸ ರಾಜಕೀಯ ಸಮೀಕರಣಗಳು ಮುಂದುವರೆದಿದ್ದು, ಆಡಳಿತಾರೂಢ ಡಿಎಂಕೆಯ ಭಾಗವಾಗಿರುವ ಎಂಎನ್‌ಎಂ ಪಕ್ಷವೂ ಕೂಡ ಮುಂಬರಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರವನ್ನು ಹಾಕಿದಂತೆ ಕಂಡು ಬರುತ್ತಿದೆ.