ದೇಶದ್ರೋಹಿಗಳ ರಕ್ಷಕರಿಗೆ, ದೇಶ ವಿಭಜಕರ ಮಿತ್ರರಿಗೆ, RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: R.Ashok

Political News: RSS ನೋಂದಣಿ ಬಗ್ಗೆ ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದ ಕಾರಣಕ್ಕೆ ಬಿಜೆಪಿ ನಾಯಕರು ಪ್ರಿಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನಂತಹ ಅತ್ಯಂತ ವಿಭಜನಕಾರಿ, ದೇಶ ವಿದ್ರೋಹಿ ಸಂಘಟನೆಯೊಂದಿಗೆ ಕೇವಲ ಅಧಿಕಾರದ ಲಾಲಸೆಗಾಗಿ ರಾಜಕೀಯ ಮೈತ್ರಿ ಮಾಡಿಕೊಂಡು ಎರಡೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ RSS ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸೌಧದ ಮುಂದೆಯೇ ದೇಶವಿರೋಧಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಅಟ್ಟಹಾಸದಿಂದ ಘೋಷಣೆ ಕೂಗಿದರೂ, ಕಣ್ಣು-ಕಿವಿ ಮುಚ್ಚಿ ಕುಳಿತು, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಉದ್ಧಟತನದಿಂದ ಸಮರ್ಥನೆ ಮಾಡಿಕೊಂಡ “ಸಚ್ಚಾರಿತ್ರ್ಯ” ಈ ಪ್ರಿಯಾಂಕ್ ಖರ್ಗೆ ಅವರದ್ದು!

ಇಂತಹ ದೇಶದ್ರೋಹಿ ಮಾನಸಿಕತೆಯ ರಕ್ಷಕರು, ಕಳೆದ ನೂರು ವರ್ಷಗಳಿಂದ ಯಾವುದೇ ಅಪೇಕ್ಷೆಯಿಲ್ಲದೆ, ನಿಸ್ವಾರ್ಥವಾಗಿ ಭಾರತಾಂಬೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರಭಕ್ತ ಸಂಘಟನೆ ಆರ್‌ಎಸ್ಎಸ್ (RSS) ನ ಕಾನೂನು ಬದ್ಧತೆ ಹಾಗೂ ದೇಶನಿಷ್ಠೆಯನ್ನು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ ಮಾತ್ರವಲ್ಲ, ನಾಚಿಕೆಗೇಡಿತನದ ಪರಮಾವಧಿ! ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ಕಿಡಿಕಾರಿದ್ದಾರೆ.

ಹೈಕಮಾಂಡ್ ಓಲೈಕೆಗಾಗಿ ಸೈದ್ಧಾಂತಿಕ ಹಪಾಹಪಿ: ಮುಂದೆ 2028ರ ವಿಧಾನಸಭಾ ಚುನಾವಣೆಯಲ್ಲೂ ನಾನೇ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂದು ಹಗಲುಗನಸು ಕಾಣುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸದ್ದಿಲ್ಲದಂತೆ ಸೆಡ್ಡು ಹೊಡೆಯಲು ಪ್ರಿಯಾಂಕ್ ಖರ್ಗೆ ಅವರ ಈ ರಾಜಕೀಯ ತಂತ್ರಗಾರಿಕೆ ಚೆನ್ನಾಗಿದೆ.

ದೆಹಲಿಯ ನಕಲಿ ಗಾಂಧಿ ಹೈಕಮಾಂಡ್‌ನ ಓಲೈಕೆ ಮಾಡಿ, ಅವರನ್ನು ಮೆಚ್ಚಿಸಿ ಹೇಗಾದರೂ ಮಾಡಿ ತಾನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕೆಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಅವರು RSS ಅನ್ನು ಬೆದರು ಬೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ.

ಸದಾ ಸಮಾಜದಲ್ಲಿ ಸೈದ್ಧಾಂತಿಕ ವಿವಾದ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇವರು ನಡೆಸುತ್ತಿರುವ ಈ ಕುತಂತ್ರ ಮತ್ತು ಒಳಸಂಚು ಪ್ರಜ್ಞಾವಂತ ಕನ್ನಡಿಗರಿಗೆ ಅರ್ಥವಾಗದಷ್ಟು ರಹಸ್ಯವಾಗಿಯೇನೂ ಉಳಿದಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

ಸಂಪೂರ್ಣ ವೈಫಲ್ಯ ಮುಚ್ಚಿಡುವ ಹತಾಶ ಪ್ರಯತ್ನ: ತಮಗೆ ಈವರೆಗೂ ವಹಿಸಿಕೊಡಲಾಗಿದ್ದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸೇರಿದಂತೆ ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಲ್ಲೂ ಸಂಪೂರ್ಣವಾಗಿ ವಿಫಲರಾಗಿ, ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ‘ಅಟ್ಟರ್ ಫ್ಲಾಪ್’ ಸಚಿವ ಎನಿಸಿಕೊಂಡಿರುವ ವ್ಯಕ್ತಿ ಈ ಪ್ರಿಯಾಂಕ್ ಖರ್ಗೆ.

ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಇವರು, ಈಗ ಹೇಗಾದರೂ ಮಾಡಿ ಗೃಹ ಇಲಾಖೆಯನ್ನು ಬಳಸಿಕೊಂಡು ಹೈಕಮಾಂಡ್ ಗಮನ ಸೆಳೆಯಬೇಕು ಎಂಬ ಹಪಾಹಪಿಗೆ ಬಿದ್ದಿದ್ದಾರೆ. ಅದಕ್ಕಾಗಿ ದಿನದ 24 ಗಂಟೆಯೂ ‘ಆರ್ ಎಸ್ಎಸ್ ಜಪ’ ಮಾಡುತ್ತಾ, ಏನಕೇನ ಪ್ರಕಾರೇನ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ನಿಮ್ಮ ಇಂತಹ ಸವಕಲು ರಾಜಕೀಯ ತಂತ್ರಗಳಿಗೆ ಹಾಗೂ ದೇಶವಿರೋಧಿ ಧೋರಣೆಗಳಿಗೆ ಕರ್ನಾಟಕದ ಪ್ರಬುದ್ಧ, ಪ್ರಜ್ಞಾವಂತ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ! ಎಂದು ಆರ್.ಅಶೋಕ್ ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

About The Author