ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಹೊಸ ಹಿಂದಿ ಸಿನಿಮಾ ‘ಥಾಮಾ’ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ‘ಕಾಂತಾರ’ ಕುರಿತು ತಮ್ಮ ಅಭಿಪ್ರಾಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ರಶ್ಮಿಕಾ ಇಂದು ಎಷ್ಟೇ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡರೂ, ಅವರಿಗೆ ಅವಕಾಶ ಕೊಟ್ಟದ್ದು ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ. ರಿಷಬ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟು, ಆ ಬಳಿಕ ಅವರು ತೆಲುಗು, ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ‘ಕಾಂತಾರ-1’ ಕುರಿತು ಕೇಳಿದ ಪ್ರಶ್ನೆಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ನಾನು ಚಿತ್ರ ಬಿಡುಗಡೆಯಾದ ಮೊದಲ 2-3 ದಿನಗಳಲ್ಲಿ ನೋಡಲಿಲ್ಲ. ಇತ್ತೀಚೆಗೆ ಸಿನಿಮಾ ನೋಡಿ, ಟೀಮ್‌ಗೆ ಮೆಸೇಜ್ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಅವರಿಂದ ‘ಥ್ಯಾಂಕ್ ಯು’ ಉತ್ತರ ಕೂಡ ಬಂತು ಎಂದು ತಿಳಿಸಿದ್ದಾರೆ.
ನಮ್ಮ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಎಲ್ಲವೂ ತಿಳಿಯುವುದಿಲ್ಲ. ವೈಯಕ್ತಿಕ ಜೀವನವನ್ನು ನಾವು ಯಾವಾಗಲೂ ಕ್ಯಾಮೆರಾದ ಮುಂದೆ ಹೇಳಲು ಆಗುವುದಿಲ್ಲ. ನಮ್ಮ ಒಳಗೆ ಏನು ನಡೆಯುತ್ತಿದೆ ಎನ್ನುವುದು ದೇವರಿಗೆ ಗೊತ್ತಿದೆ. ನಾವು ನಮ್ಮ ಸಂದೇಶಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಜನರಲ್ಲಎಂದಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ರಶ್ಮಿಕಾ ಅವರು ಬ್ಯಾನ್ ಆಗಿದ್ದಾರೆ ಎನ್ನುವ ವದಂತಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಲೇ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇಲ್ಲಿಯವರೆಗೆ, ನನ್ನನ್ನು ನಿಷೇಧಿಸಲಾಗಿಲ್ಲ. ಕಲಾವಿದರು ಸಾರ್ವಜನಿಕ ಅಭಿಪ್ರಾಯಕ್ಕೆ ಅನುಗುಣವಾಗಿ ಬದುಕಲು ಸಾಧ್ಯವಿಲ್ಲ. ಟೀಕೆಗಳು ಹೆಚ್ಚಾಗಿ ತಪ್ಪು ತಿಳುವಳಿಕೆ ಅಥವಾ ಅಪೂರ್ಣ ಜ್ಞಾನದಿಂದ ಉಂಟಾಗುತ್ತವೆ ಎಂದು ನಟಿ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ


