“ವಿಕ್ರಾಂತ್ ರೋಣ” ಸಿನಿಮಾ ನೋಡಿ ಟ್ವೀಟ್ ಮಾಡಿದ ರಾಜಮೌಳಿ ಏನಂದ್ರು ಗೊತ್ತಾ..?

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಖ್ಯಾತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಕೂಡಾ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ವಿಕ್ರಾಂತ್‌ ರೋಣ’ ನೂರು ಕೋಟಿ ಕ್ಲಬ್‌ ಸೇರುವ ಹೊಸ್ತಿಲಲ್ಲಿ ‘ಬಾಹುಬಲಿ’ ನಿರ್ದೇಶಕರ ಈ ಮಾತು ಚಿತ್ರತಂಡಕ್ಕೆ ಪ್ಲಸ್‌ಪಾಯಿಂಟ್‌ ಆಗಲಿದೆ.

ಟ್ವೀಟ್‌ ಮಾಡಿರುವ ರಾಜಮೌಳಿ, ‘ವಿಕ್ರಾಂತ್‌ ರೋಣದ ಯಶಸ್ಸಿಗೆ ಅಭಿನಂದನೆಗಳು. ಇಂಥ ಕಥಾಹಂದರ ಹೊಂದಿರುವ ಸಿನಿಮಾದ ಮೇಲೆ ಬಂಡವಾಳ ಹೂಡಲು ಧೈರ್ಯ ಹಾಗೂ ನಂಬಿಕೆ ಅಗತ್ಯ. ಸುದೀಪ್‌ ಅವರೇ ನೀವು ಇವೆರಡನ್ನೂ ಮಾಡಿದ್ದೀರಿ ಹಾಗೂ ಇದರ ಫಲ ಇದೀಗ ನಿಮ್ಮ ಮುಂದಿದೆ. ಪ್ರಿಕ್ಲೈಮ್ಯಾಕ್ಸ್‌ ಹಾಗೂ ಚಿತ್ರದ ಕಥೆ ಅದ್ಭುತವಾಗಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಗುಡ್ಡಿಯ ಸ್ನೇಹಿತ ಭಾಸ್ಕರನನ್ನು ನಾನು ಪ್ರತ್ಯೇಕವಾಗಿ ಗುರುತಿಸಲಿಚ್ಛಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸುದೀಪ್‌ ಅವರೂ ಟ್ವೀಟ್‌ ಮಾಡಿ ಧನ್ಯವಾದ ತಿಳಿಸಿದ್ದಾರೆ. ಒಟ್ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ಈ ವಾರಾಂತ್ಯದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಮಾಡಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

About The Author