Special Story: ಕೊರಗಜ್ಜ ಅನ್ನೋದು ತುಳುನಾಡ ಜನರ ನಂಬಿಕೆ. ಹೆದರಿಕೆ, ಕಳ್ಳತನ, ಅನಾರೋಗ್ಯ, ಹೀಗೆ ಏನೇ ಕಷ್ಟ ಬಂದರೂ, ದೇವರೊಂದಿಗೆ ಒಮ್ಮೆ ನೆನಪಿಗೆ ಬರುವವರೇ ಕೊರಗಜ್ಜ. ಏಕೆಂದರೆ, ಭಕ್ತಿಯಿಂದ ಕೊರಗಜ್ಜನನ್ನು ನೆನಪಿಸಿಕೊಂಡವರಿಗೆ ಎಂದಿಗೂ ಮೋಸವಾಗಿಲ್ಲ. ಹಾಗಾಗಿ ಕೊರಗಜ್ಜ ಎಂಬುವುದು ಮಂಗಳೂರು, ಉಡುಪಿ ಜನರ ನಂಬಿಕೆಗೆ ಮತ್ತೊಂದು ಹೆಸರು.
ಆದರೆ ಕೊರಗಜ್ಜನ ಮೇಲೆ ಇರುವ ಭಕ್ತಿ ಬರೀ ಮಂಗಳೂರು- ಉಡುಪಿ ಜನರಿಗಷ್ಟೇ ಅಲ್ಲ. ಬದಲಾಗಿ ಇದು ಹಲವು ಕಡೆ ಹಬ್ಬಿದೆ. ಇದಕ್ಕೆ ಉದಾಹರಣೆ ಅಂದ್ರೆ, ಬಾಲಿವುಡ್ ನಟಿ ಕತ್ರೀನಾ ಕೈಫ್ ಮೊನ್ನೆ ಮೊನ್ನೆಯಷ್ಟೇ ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ಅತಿಯಾ ಶೆಟ್ಟಿ ಜೊತೆ ಬಂದು, ಕೊರಗಜ್ಜನ ದರ್ಶನ ಮಾಡಿ, ಕೋಲದಲ್ಲಿ ಭಾಗವಹಿಸಿದ್ದು.
ಧರ್ಮದಲ್ಲಿ ಮುಸ್ಲಿಂ ಆಗಿರುವ ಕತ್ರೀನಾ ನಂಬಿದ್ದು ಕೊರಗಜ್ಜನನ್ನು
ಆಕೆ ನಮ್ಮ ದೇಶದವಳೂ ಅಲ್ಲ. ವಿದೇಶಿ ಪ್ರಜೆ. ಆಕೆ ಬಾಲಿವುಡ್‌ಗೆ ಬಂದು 20 ವರ್ಷವಾಗಿರಬೇಕು. ಇದೀಗ ಭಾರತೀಯ ನಟನನ್ನು ವಿವಾಹವಾಗಿ, ಇಲ್ಲಿನ ಸೊಸೆಯಾಗಿದ್ದಾಳೆ. ಇಂಥ ಹೆಣ್ಣು ಮಗಳು, ಮಂಗಳೂರಿನ ಕುತ್ತಾರುಗೆ ಬಂದು, ಕೊರಗಜ್ಜನ ಕೋಲದಲ್ಲಿ ಭಾಗವಹಿಸಿದ್ದಾಳೆ. ಊರಿಗೆ, ಹಿಂದುತ್ವಕ್ಕೆ ಸಂಬಂಧವೇ ಇಲ್ಲದ ಓರ್ವ ಮುಸ್ಲಿಂ ಮಹಿಳೆಯನ್ನು ಇಲ್ಲಿವರೆಗೆ ಕರೆತಂದ ಕೊರಗಜ್ಜನ ಶಕ್ತಿ ಅದೆಂಥದ್ದು ಅಂತಾ ನೀವೇ ಅಂದಾಜಿಸಿ. ಅದೇ ರೀತಿ ಮಂಗಳೂರಿನ ಎಷ್ಟೋ ಜನ ಮುಸ್ಲಿಂರು ಕೊರಗಜ್ಜನನ್ನು ನಂಬುತ್ತಾರೆ. ಕೋಲ ಕೊಡುತ್ತಾರೆ ಎಂಬುದು ಇನ್ನೊಂದು ವಿಶೇಷ.
ಕೊರಗಜ್ಜ ಎಂದರೆ ಯಾರು..?
ಕೊರಗಜ್ಜ, ಕೊರಗ ತನಿಯ ಎಂದು ಹೇಳುವ ಈ ದೈವ, ಶಿವನ ಒಂದು ಅಂಶ. ದೈವಗಳೆಲ್ಲ ಹೇಗೆ ಶಿವಗಣಗಳೋ, ಅದೇ ರೀತಿ ಕೊರಗಜ್ಜ ಕೂಡ ಶಿವಗಣಗಳಲ್ಲಿ ಓರ್ವ. ಹಾಗಾಗಿಯೇ ಶಿವನ ಬಳಿಕ ಹೇಗೆ ತ್ರಿಶೂಲ ಮತ್ತು ನಾಗವಿದೆಯೋ, ಅದೇ ರೀತಿ ಕೊರಗಜ್ಜನ ಬಳಿಯೂ ತ್ರಿಶೂಲ ಮತ್ತು ನಾಗವಿದೆ.
ಕೊರಗಜ್ಜನ ಮೂಲಸ್ಥಳ ಯಾವುದು..?
ಕೊರಗಜ್ಜನ ಮೂಲ ಸ್ಥಳ ಮಂಗಳೂರಿನ ಕುತ್ತಾರು ಎಂಬ ಸ್ಥಳ. ಇದು ಸ್ವಾಮಿ ಕೊರಗಜ್ಜನ ಮೂಲ ಸ್ಥಳವಾಗಿದೆ. ಇಲ್ಲಿ ಸಾಮಾನ್ಯ ಭಕ್ತರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲ ಕೊರಗಜ್ಜ ಭಕ್ತರು ಬಂದು, ಕೈ ಮುಗಿದು ಹೋಗುತ್ತಾರೆ. ಇ್ಲಲಿಗೆ ಬರುವವರು ಮೊದಲು ರಕ್ತೇಶ್ವರಿ ದೇವಿಯ ದರ್ಶನ ಮಾಡುತ್ತಾರೆ. ಬಳಿಕ ದೈವಗಳ ದರ್ಶನ ಮಾಡಿ, ಕೊನೆಗೆ ಕೊರಗಜ್ಜನ ದರ್ಶನ ಮಾಡುತ್ತಾರೆ.
ಹೀಗೆ ಕೊರಗಜ್ಜನನ್ನು ಕಾಣಲು ಹೋಗುವ ಭಕ್ತರು, ಬೀಡಾ, ಚಕ್ಕುಲಿ, ಮದ್ಯ ತೆಗೆದುಕೊಂಡು ಹೋಗಿ, ನೈವೇದ್ಯ ಮಾಡುತ್ತಾರೆ. ಆದರೆ ಇಲ್ಲಿಗೆ ಮದ್‌ಯ ತೆಗೆದುಕೊಂಡು ಹೋಗಲು ಒಂದು ನಿಯಮವಿದೆ. ಅದೇನೆಂದರೆ, ರಕ್ತೇಶ್ವರಿ ಮತ್ತು ದೈವಗಳನ್ನು ನೋಡಲು ಹೋಗುವಾಗ ಮದ್ಯ ತೆಗೆದುಕೊಂಡು ಹೋಗುವಂತಿಲ್ಲ.
ಇವರಿಬ್ಬರ ದರ್ಶನ ಪಡೆದ ಬಳಿಕ, ನೀವು ಕೊರಗಜ್ಜನನ್ನು ನೋಡಲು ಹೋಗುವಾಗ, ಮದ್ಯ, ಬೀಡಾ, ಚಕ್ಕುಲಿಯನ್ನು ತೆಗೆದುಕೊಂಡು ಹೋಗಬಹುದು. ಇನ್ನು ಕೊರಗಜ್ಜನಿಗೆ ಕಳಿ ಅಂದ್ರೆ ಇಷ್ಟವಾಗಿದ್ದು. ಆದರೆ ಆ ರೀತಿಯ ಮದ್ಯ ಈಗ ಯಾರೂ ತಯಾರಿಸದ ಕಾರಣ, ಪ್ಯಾಕ್ ಮಾಡಿರುವ ಮದ್ಯ ತೆಗೆದುಕೊಂಡು ಹೋಗಿ ಅರ್ಪಿಸುತ್ತಾರೆ.
ಕೊರಗಜ್ಜನ ಗಂಧದ ಮಹಿಮೆ..
ಕೊರಗಜ್ಜನ ದೈವಸ್ಥಾನಕ್ಕೆ ಹೋದರೆ, ನಿಮಗೆ ಅಲ್ಲಿ ಗಂಧ ನೀಡಲಾಗುತ್ತದೆ. ಕೆಲವೆಡೆ ಕಪ್ಪು ಗಂಧ, ಇನ್ನು ಕೆಲವೆಡೆ ಬಿಳಿ ಗಂಧ ನೀಡಲಾಗುತ್ತದೆ. ನೀವು ಇದನ್ನು ಹಚ್ಚಿಕೊಳ್ಳುವುದಲ್ಲದೇ, ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಬಳಸಬಹುದು. ಮನೆಮಕ್ಕಳು ಅನಾರೋಗ್ಯಕ್ಕೀಡಾದಾಗ, ಮುಖ್ಯವಾದ ಕೆಲಸಕ್ಕೆ ಹೋಗುವಾಗ, ಸಂದರ್ಶನಕ್ಕೆ ಹೋಗುವಾಗ, ಯಾರಾದರೂ ಊಟಕ್ಕೆ ಆಮಂತ್ರಿಸಿದಾಗ, ಅಂಥವರ ಮನೆಗೆ ಹೋಗುವಾಗ, ನೀವು ಆ ಗಂಧವನ್ನು ಹಂಚಿಕೊಂಡು ಹೋದರೆ, ದುಷ್ಟ ಶಕ್ತಿಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ಪವಾಡಪುರುಷ ಕೊರಗಜ್ಜನ ಮಹಿಮೆ
ಕೊರಗಜ್ಜನ ಬಳಿ ಹೋಗಿ ಎಷ್ಟೋ ಜನ ತಮ್ಮ ಮಕ್ಕಳ ಜೀವ ಉಳಿಸಿಕೊಂಡಿದ್ದಾರೆ. ಎಷ್ಟೋ ಜನ ಸಾಯುವ ಸ್ಥಿತಿಗೆ ಹೋಗಿ, ಕೊರಗಜ್ಜನನ್ನು ನಂಬಿ ಬದುಕುಳಿದಿದ್ದಾರೆ. ಇನ್ನು ಕೆಲವರು ಮಾಟ ಮಂತ್ರಗಳಿಂದ ಕಷ್ಟ ಅನುಭವಿಸಿ, ಕೊರಗಜ್ಜನ ಮೊರೆ ಹೋಗಿ, ನೆಮ್ಮದಿಯ ಬಾಳು ಬಾಳುತ್ತಿದ್ದಾರೆ. ಕೊರಗಜ್ಜನ ಭಕ್ತರ ಮನೆಯಲ್ಲಿ ಕಳ್ಳತನವಾಾದರೆ, ಅವರು ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಬದಲಾಗಿ, ಕೊರಗಜ್ಜನಲ್ಲಿಗೆ ಬರುತ್ತಾರೆ. ಇಲ್ಲಿ ಬಂದು ತಮ್ಮ ವಸ್ತು ಕಲೆದು ಹೋಗಿದೆ, ಹುಡುಕಿಕೊಡಿ ಎಂದು ಭಕ್ತಿಯಿಂದ ಬೇಡಿದರೆ, ಕೊರಗಜ್ಜ ವಸ್ತುವನ್ನು ಸಿಗುವಂತೆ ಮಾಡುವುದಲ್ಲದೇ, ಆರೋಪಿಗಳು ಯಾರು ಅಂತಲೂ ತೋರಿಸಿಕೊಡುತ್ತಾರೆ.
ಇನ್ನು ಕೊರಗಜ್ಜನ ಪವಾಡವನ್ನು ಹೀಯಾಳಿಸುವವರು, ಕೊರಗಜ್ಜನ ದೇವಸ್ಥಾನದಲ್ಲಿ, ಕೊರಗಜ್ಜನ ಕಟ್ಟೆಯ ಮೇಲೆ ಕೆಟ್ಟದಾಗಿ ನಡೆದುಕೊಳ್ಳುವರಿಗೆ ಕೊರಗಜ್ಜ ಶಿಕ್ಷೆಯೂ ಕೊಟ್ಟಿದ್ದಾರೆ. ಕೊರಗಜ್ಜನ ಕಟ್ಟೆಯ ಮೇಲೆ ಮೂತ್ರ ಮಾಡಿದ ನಾಲ್ವರು ಮುಸ್ಲಿಂ ಪುಂಡರಿಗೆ ಕೊರಗಜ್ಜ ಶಿಕ್ಷೆ ನೀಡಿದ್ದರು. ಓರ್ವ ರಕ್ತ ಕಾರಿ ಸತ್ತರೆ, ಇನ್ನೋರ್ವ ಹುಚ್ಚನಾಗಿದ್ದ, ಮತ್ತೋರ್ವ ಸ್ವಯವೇ ಇಲ್ಲದವನಂತಾಗಿದ್ದ. ಇದನ್ನೆಲ್ಲ ನೋಡಿ ನಾಲ್ಕನೇಯವ ಕೊರಗಜ್ಜನ ಬಳಿ ಬಂದು, ತಪ್ಪಾಯಿತೆಂದು ಕ್ಷಮೆಯೂ ಕೇಳಿದ್ದ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ