Wednesday, September 11, 2024

Latest Posts

ಕಾಸಿಗಾಗಿ ಹುದ್ದೆ ದಾಖಲೆ ಜೇಬಿನಲ್ಲೇ ಇದೆ ..! ಹೆಚ್.ಡಿ.ಕುಮಾರಸ್ವಾಮಿ

- Advertisement -

ರಾಜಕೀಯ ಸುದ್ದಿ: ಹೆಚ್.ಡಿ.ಕುಮಾರಸ್ವಾಮಿ ಅವರಿಂದ ನೇರ ಆರೋಪ. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ; ₹10 ಕೋಟಿಗೆ ಹುದ್ದೆ ಬಿಕರಿ, ಕಾಸಿಗಾಗಿ ಹುದ್ದೆ ದಾಖಲೆ ಜೇಬಿನಲ್ಲೇ ಇದೆ ಎಂದು ಪೆನ್ ಡ್ರೈವ್ ಪ್ರದರ್ಶನ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಈ ಸರಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆ ಇದೆ ಲೇವಡಿ ಮಾಡಿದ್ದಾರೆ.

ಬೆಂಗಳೂರು: ಇಂಧನ ಇಲಾಖೆಯಲ್ಲಿ ಹುದ್ದೆಗೆ ತಲಾ 10 ಕೋಟಿ ರೂಪಾಯಿ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ನೇರ ಆರೋಪ ಮಾಡಿದರು.

ಈ ಸರಕಾರ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಪೂರ್ಣವಾಗಿ ನಿರತವಾಗಿದೆ ಎಂದು ನೇರ ಆರೋಪ ಮಾಡಿದ ಅವರು, ಈ ಸರ್ಕಾರ ಸಂಪೂರ್ಣವಾಗಿ ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿದೆ ಎಂದು ಹೇಳಿ ತಮ್ಮ ಬಳಿ ಮಹತ್ವದ ದಾಖಲೆ ಇದೆ ಎಂದು ಒಂದು ಪೆನ್ ಡ್ರೈವ್ ಪ್ರದರ್ಶಿಸಿದರು.

ವಿಧಾನಸೌಧದಲ್ಲಿ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸರಕಾರದ ವಿರುದ್ಧ ತೀವ್ರ ರೀತಿಯಲ್ಲಿ ಹರಿಹಾಯ್ದರು.

ಇಂಧನ‌ ಇಲಾಖೆಯಲ್ಲಿ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಸರ್ಕಾರದಲ್ಲಿ ನಗದು ಅಭಿವೃದ್ಧಿ ಇಲಾಖೆ ಒಂದು ಇದೆ ಎಂದು ಯಾರೊ ಹೇಳಿದ್ದರು. ಅದನ್ನು ‘ನಗದು ಅಭಿವೃದ್ಧಿ ‘ ಇಲಾಖೆ ಅಂತ ಯಾಕೆ ಕರೆಯಬಹುದು ಎಂದು ಅವರು ವಿವರಿಸಿದರು. ಅದು ನಿಜ ಆಗುತ್ತಿರುವ ರೀತಿಯಲ್ಲಿಯೇ ನಗರವನ್ನು ಅಭಿವೃದ್ಧಿ ಮಾದರಿ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿಗೆ ಒಬ್ಬರು, ಬೆಂಗಳೂರು ಹೊರಗೆ ಒಬ್ಬರು ‘ನಗದು ಅಭಿವೃದ್ಧಿ ‘ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಎಂದರೆ ನಗದು ಅಭಿವೃದ್ಧಿ ಮಾತ್ರ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ನಿನ್ನೆ ಇಂಧನ ಇಲಾಖೆಯಲ್ಲಿ ಎರಡು ವರ್ಗಾವಣೆಗಳು ಆಗಿವೆ. ಆ ಎರಡು ಹುದ್ದೆಗಳನ್ನು ತಲಾ 10 ಕೋಟಿ ರೂಪಾಯಿಗೆ ಮಾರಿಕೊಳ್ಳಲಾಗಿದೆ. ಅಲ್ಲಿಗೆ ಬಂದು ಕೂತಿರುವ ಆ ಅಧಿಕಾರಿ ಒಂದು ದಿನಕ್ಕೆ 50 ಲಕ್ಷ ಕಮಿಷನ್ ಹೊಡೆಯುತ್ತಾನೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಅಸಹ್ಯಕ್ಕೆ ಸರ್ಕಾರ ಏನು ಉತ್ತರ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಪ್ರಶ್ನಿಸಿದರು.ಇದೇ ವೇಳೆ ಅವರು ಇಂಧನ ಇಲಾಖೆಯಲ್ಲಿ ವರ್ಗಾವಣೆ ಅದವರ ವರ್ಗಾವಣೆ ಪತ್ರಗಳನ್ನು ಮಾಧ್ಯಮಗಳಿಗೆ ನೀಡಿದರು.

ವೆಸ್ಟ್ ಎಂಡ್ ಎಂದ ಕಾಂಗ್ರೆಸ್ ಗೆ ಚಾಟಿ:

ತಮ್ಮ ಬಗ್ಗೆ ಲಘುವಾಗಿ ಟೀಕೆ ಮಾಡಿರುವ ಕಾಂಗ್ರೆಸ್ ಬಗ್ಗೆ ತೀವ್ರವಾಗಿ ಹರಿಹಾಯ್ದ ಕುಮಾರಸ್ವಾಮಿ ಅವರು, KST ಟ್ಯಾಕ್ಸ್ ನಾನು ಇಟ್ಕೊಂಡಿಲ್ಲ. ಹಿಂದೆ ನಾನು ಕಾಂಗ್ರೆಸ್ ಪಕ್ಷದ ಮೈತ್ರಿ ಸರಕಾರ ರಚನೆ ಮಾಡಿದ್ದೆ. ಒಂದು ವೇಳೆ ವೆಸ್ಟೆಂಡ್ ಬಾಕಿ ಬಿಲ್ ಕಾಂಗ್ರೆಸ್ ಗೆ ಕಳಿಸಿದರಾ ಎನ್ನುವುದು ನನ್ನ ಅನುಮಾನ ಎಂದು ಕೈ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿಗಳು ಕಟುವಾಗಿ ಟಾಂಗ್ ಕೊಟ್ಟರು.

ನಾನೇನು ಬೀದಿಲಿ ಹೋಗೋದಾ? ಮುಖ್ಯಮಂತ್ರಿಯಾಗಿ ಬೀದಿಯಲ್ಲಿ ಇರಬೇಕಿತ್ತಾ? ಸ್ವಲ್ಪ ಹಣ ಖರ್ಚು ಮಾಡುವ ಯೋಗ್ಯತೆಯೂ ನನಗೆ ಇಲ್ವಾ? ತಾಜ್ ವೆಸ್ಟ್ ಎಂಡ್‌ನಲ್ಲಿ ಈಗಲೂ ರೂಂ ಇದೆ. ಇವರನ್ನು ಕೇಳಿ ನಾನು ರೂಂ ಮಾಡಬೇಕಾ? ಎಷ್ಟು ಗಂಟೆಗೆ ವಾಶ್‌ರೂಂಗೆ ಹೋಗಬೇಕು ಎಂದು ಕಾಂಗ್ರೆಸ್‌ನವರನ್ನ ಕೇಳಬೇಕಾ? ಬೇಕಿದ್ದರೆ ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ನನ್ನ ಎಷ್ಟಿತ್ತು ಆಸ್ತಿ? ಈಗ ಎಷ್ಟಿದೆ ಅಂತ ತನಿಖೆ ಮಾಡಲಿ ಎಂದು ಅವರು ಸವಾಲು ಹಾಕಿದರು.

ನಾನು ಬೇಸಾಯ ಮಾಡಿದವನು, ಸಿನಿಮಾ ಮಾಡಿದವನು. ಕೆಲವರಂತೆ ಟೆಂಟಿನಲ್ಲಿ ನೀಲಿಚಿತ್ರ ತೋರಿಸಿ ದುಡ್ಡು ಮಾಡಿದವನಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದೀನಾ? ನಾನು ಹೇಗೆ ಬೆಳೆದುಬಂದೆ ಎನ್ನುವ ಅರಿವು ನನಗೂ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾಖಲೆ ಜೇಬಿನಲ್ಲೇ ಇದೆ, ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ:

ದಾಖಲೆಗಳ ಬಗ್ಗೆ ನನ್ನ ಬಳಿ ಹುಡುಗಾಟ ಆಡುವುದು ಬೇಡ. ದಾಖಲೆ ಇಲ್ಲದೆ ನಾನು ಮಾತನಾಡುವುದಿಲ್ಲ. ಕಳೆದ ಮೂರೂವರೆ ವರ್ಷ ಒಂದು ದಾಖಲೆಯನ್ನೂ ಬಿಡದೆ ಕಾಂಗ್ರೆಸ್ ಪಕ್ಷ ಗಾಳಿಯಲ್ಲಿ ಗುಂಡು ಹೊಡೆಯಿತು. ನಾನು ಹಾಗೆ ಮಾಡುವುದಿಲ್ಲ. ದಾಖಲೆ ಇರುವ ಪೆನ್ ಡ್ರೈವ್ ನನ್ನ ಜೇಬಿನಲ್ಲೆ ಇದೆ. ಸಮಯ ಬರಲಿ, ಬಿಡುಗಡೆ ಮಾಡ್ತೀನಿ ಎಂದು ಸ್ಪಷ್ಟ ಮಾತುಗಳಲ್ಲಿ ಕುಮಾರಸ್ವಾಮಿ ಅವರು ಹೇಳಿದರು.

ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಮಾತನಾಡಲಿ, ಅದು ಅವರ ಗುಣ ತೋರಿಸುತ್ತದೆ. ಎಲ್ಲಕ್ಕೂ ಕಾಲವೇ ಉತ್ತರ ನೀಡುತ್ತದೆ. ನಿನ್ನೆ ಮಂಡ್ಯದಲ್ಲಿ ಒಂದು ವರ್ಗಾವಣೆ ಆಯ್ತಲ್ಲ, ತಪ್ಪು ಎಸಗಿ ಸೇವೆಯಿಂದ ಅಮಾನತು ಆದವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಪಟ್ಟ ಕಟ್ಟಿದ್ದಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದವನು ನಾನು. ಇವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದರು.

ಮೈ ಕೈ ಪರಚಿಕೊಳ್ಳೋದು ಬೇಡ ಅಂತಾ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಾನೇಕೆ ಮೈ ಕೈ ಪರಚಿಕೊಳ್ಳಲಿ?ಸೋತಾಗಲೂ ಜನರ ಕಷ್ಟ ಸುಃಖ ಕೇಳಿದ್ದೇವೆ. ಅಧಿಕಾರ ಬಂದಾಗ ಹಿಗ್ಗಿಲ್ಲ, ಇಲ್ಲದಾಗ ಕುಗ್ಗಿಲ್ಲ . ಇವರಿಂದ ಕಲಿಯೋ ದರಿದ್ರ ನಂಗೆ ಬಂದಿಲ್ಲ ಎಂದು ಅವರು ಕಿಡಿಕಾರಿದರು.

ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ?:

ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣ ಪ್ರಸ್ತಾಪ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು; ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ, ಜೋಕೆ ಎಂದು ಎಚ್ಚರಿಸಿದರು. ಬೆಂಗಳೂರು ಅಭಿವೃದ್ಧಿ ಮಾಡೋಕೆ ಹೋಗಿ ಈಗಾಗಲೇ ಸಮಾಧಿ ಮಾಡಿದ್ದೀರಿ. ಬೆಂಗಳೂರು ಅಭಿವೃದ್ಧಿಗೆ ಅತ್ಯುತ್ತಮ ಗುಣಮಟ್ಟದಲ್ಲಿ ತಾಂತ್ರಿಕವಾಗಿ, ಪ್ರಾಯೋಗಿಕವಾಗಿ ಕೆಲಸ ಮಾಡಿ. ಟನಲ್ ಮಾಡೋಕೆ ಹೋಗಿ ಇಡೀ ನಗರವನ್ನೇ ಸಮಾಧಿ ಮಾಡಬೇಡಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಒಳ್ಳೆ ಮಾತು ಹೇಳಿದ್ದಾರೆ:

ನಿನ್ನೆಯ ದಿನ ಯಡಿಯೂರಪ್ಪನವರು ನನ್ನ ಬಗ್ಗೆ ಒಂದೊಳ್ಳೆ ಮಾತು ಹೇಳಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದೇನೆ. ಜನಪರ ವಿಷಯಗಳಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ದನಿ ಎತ್ತುವುದು ತಪ್ಪಲ್ಲ. ರಾಜ್ಯದಲ್ಲಿ ಹೊಸ ಅಧ್ಯಾಯ ಶುರುವಾಗಬೇಕು. ನನಗೆ ಯಾರು ಸಹಕಾರ ಕೊಡ್ತಾರೊ ಅವರ ಬೆಂಬಲ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಬಾವಿಗೆ ಬಿದ್ದ ಕಾರು

ಮಂಗಳೂರಿಗರ ಮೆಚ್ಚುಗೆ ಪಡೆದ ಲೈನ್ ಮ್ಯಾನ್…!

ಲುಲುಕುಮಾರ್ ಎಂದು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತಿರುಗೇಟು

- Advertisement -

Latest Posts

Don't Miss