ಸೆಪ್ಟೆಂಬರ್ ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ ಎನ್ನುತ್ತಿದ್ದ ಕೆ.ಎನ್ ರಾಜಣ್ಣ ಅವ್ರೇ ಸಚಿವ ಸ್ಥಾನದಿಂದ ವಜಾ ಆದರು. ಸಚಿವ ಸ್ಥಾನ ಕಳೆದುಕೊಂಡ್ರು ಅವರು ಆಡಿದ ಮಾತು ಸುಳ್ಳಾಗೋದಿಲ್ಲ ಅನ್ಸುತ್ತೆ. ಸೆಪ್ಟೆಂಬರ್ ತಿಂಗಳು ಶುರುವಾಗುತ್ತಿದ್ದಂತೆ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿವಾದದ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಪಕ್ಷದಿಂದ ಸಚಿವ ಸ್ಥಾನ ಅಲಂಕರಿಸಿದ್ದ ಹಿರಿಯ ನಾಯಕ ಕೆ.ಎನ್. ರಾಜಣ್ಣ ಈಗ ಸಂಪೂರ್ಣವಾಗಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಈಗ ಕೇಳಿ ಬರುತ್ತಿರುವ ಸ್ಫೋಟಕ ಸುದ್ದಿ ಅಂದರೆ ರಾಜಣ್ಣ ಬಿಜೆಪಿ ಸೇರ್ಪಡೆಗೆ ಸನ್ನದ್ಧರಾಗಿದ್ದಾರಂತೆ.
ಇದಕ್ಕೆ ಪುಷ್ಠಿಕೊಡುವಂತೆ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣರ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಮನಗರದ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಣ್ಣರು ಈಗಾಗಲೇ ಬಿಜೆಪಿ ಸೇರ್ಪಡೆಯ ಅರ್ಜಿ ಹಾಕಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಅವರ ಈ ಮಾತು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮತಕಳ್ಳತನದ ಬಗ್ಗೆ ಟೀಕೆ ಮಾಡಿ, ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದ ರಾಜಣ್ಣ, ಕೊನೆಗೆ ಸಚಿವ ಸ್ಥಾನ ಕಳೆದುಕೊಂಡರು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಹಳೆಯ ಮಾತಿನಂತೆ, ರಾಜಣ್ಣರ ಹೇಳಿಕೆಗಳೇ ಅವರಿಗೆ ಸಂಕಟ ತಂದಿವೆ.
ರಾಮನಗರದ ಜನಸಂಪರ್ಕ ಕಾರ್ಯಕ್ರಮದಲ್ಲಿ ಹೆಚ್.ಸಿ. ಬಾಲಕೃಷ್ಣ ಮಾತನಾಡಿದರು. ರಾಜಣ್ಣರ ಬ್ರೈನ್ ಮ್ಯಾಪಿಂಗ್ ಆಗಬೇಕು. ಅವರು ಯಾರ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿಯಬೇಕು. ಅವರು ಬೇರೆ ಬೇರೆ ನಾಯಕರ ಜೊತೆಗೆ ಮಾತನಾಡುತ್ತಿದ್ದಾರೆ. ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಣ್ಣರ ವಿರುದ್ಧ ಗೂಬೆ ಕೂರಿಸುವ ಪಿತೂರಿಯಿದೆ ಎಂದು ಆರೋಪಿಸಿದ ಬಾಲಕೃಷ್ಣ, ಕಾಂಗ್ರೆಸ್ ನಾಯಕರ ಮೇಲಿನ ಷಡ್ಯಂತ್ರದ ಆರೋಪವನ್ನು ತಳ್ಳಿಹಾಕಿದ್ದಾರೆ. ನಮ್ಮ ನಾಯಕರ ಮೇಲೆ ಯಾವುದೇ ಷಡ್ಯಂತ್ರವಿಲ್ಲ. ರಾಜಣ್ಣರೇ ಪಕ್ಷದ ವಿರುದ್ಧ ಮಾತನಾಡಿ ತೊಂದರೆಗೆ ಸಿಲುಕಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆ.ಎನ್. ರಾಜಣ್ಣ ಈಗಾಗಲೇ ಬಿಜೆಪಿ ಅರ್ಜಿ ಹಾಕಿದ್ದಾರೆ ಎಂಬ ಶಾಸಕ ಹೆಚ್.ಸಿ. ಬಾಲಕೃಷ್ಣರ ಹೇಳಿಕೆ ರಾಜಣ್ಣರ ಬಿಜೆಪಿ ಸೇರ್ಪಡೆಗೆ ಹೆಚ್ಚು ಬಲ ತುಂಬಿದೆ. ರಾಜಣ್ಣರ ವಿವಾದಾತ್ಮಕ ಹೇಳಿಕೆಗಳು ಕಾಂಗ್ರೆಸ್‌ಗೆ ಮುಜುಗರವನ್ನುಂಟು ಮಾಡಿದ್ದು, ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಬಾಲಕೃಷ್ಣರ ಆರೋಪವು ಕಾಂಗ್ರೆಸ್‌ನ ಆಂತರಿಕ ಕಲಹವನ್ನು ಬಯಲಿಗೆಳೆಯುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆಯುತ್ತಿದೆ. ರಾಜಣ್ಣರ ಮುಂದಿನ ನಿರ್ಧಾರ ರಾಜ್ಯ ರಾಜಕೀಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ರಾಜಣ್ಣ ಅವ್ರು ಬಿಜೆಪಿ ಕಡೆ ಮುಖ ಮಾಡಿದ್ರೆ ಸೆಪ್ಟೆಂಬರ್ ಕ್ರಾಂತಿ ಅನ್ನೋದು ಸಂಭವಿಸಿದ್ರು ಅಚ್ಚರಿಯಿಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ