ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ನಂತರ, ವರ್ತೂರು ಮತ್ತು ಪಣತ್ತೂರು ಭಾಗದ ನಿವಾಸಿಗಳು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲ ಸೌಕರ್ಯ ಕೊಡದೆ ತೆರಿಗೆ ಕೇಳುವುದು ನ್ಯಾಯವಲ್ಲ ಎಂದು ಹೇಳಿದ ಅವರು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿದ್ದರೆ ಆಸ್ತಿ ತೆರಿಗೆ ಪಾವತಿಸಲು ಸಿದ್ಧರಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.
ಈ ಭಾಗದ ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಡೆ ಗುಂಡಿಗಳೇ ಕಾಣಿಸುತ್ತಿವೆ. ಇಂತಹ ರಸ್ತೆಗಳ ಪರಿಣಾಮವಾಗಿ ಟ್ರಾಫಿಕ್ ಜಾಮ್‌ಗಳು ದಿನನಿತ್ಯದ ಸಮಸ್ಯೆಯಾಗಿ ಪರಿಣಮಿಸಿದ್ದು, ವಾಹನ ಸಂಚಾರಕ್ಕೆ ದೊಡ್ಡ ತೊಂದರೆ ಉಂಟಾಗಿದೆ. ವಿಶೇಷವಾಗಿ ಸ್ಕೂಲ್ ಬಸ್‌ಗಳು ಸಂಚರಿಸುವ ಸಮಯದಲ್ಲಿ ಅಪಘಾತಗಳು ಮಾಮೂಲಾಗಿದ್ದು, ಪೋಷಕರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಗುಂಡಿಮುಕ್ತ ರಸ್ತೆ ಹಾಗೂ ಸಮರ್ಪಕ ಮೂಲ ಸೌಕರ್ಯ ಒದಗಿಸಿದ ಬಳಿಕವೇ ತೆರಿಗೆ ವಸೂಲಿ ಮಾಡಬೇಕು ಎಂದು ಇಂಡಿವಿಡುವಲ್ ಟ್ಯಾಕ್ಸ್ ಪೇಯರ್ಸ್ ಫೋರಂ( Individual Tax Payers Forum) ಸರ್ಕಾರಕ್ಕೆ ಪತ್ರ ಬರೆದಿದೆ.
ರಸ್ತೆಗಳ ದುಸ್ಥಿತಿಯ ಜೊತೆಗೆ ಈ ಪ್ರದೇಶದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆಯೂ ತೀವ್ರ ಸಮಸ್ಯೆಯಾಗಿದೆ. ಮಳೆ ಬಂದಾಗ ನೀರು ವರ್ತೂರು ಕೆರೆಗೆ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳು ನೀರಿನಲ್ಲಿ ಮುಳುಗಿ, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ಇತ್ತೀಚಿನ ಮಳೆಯಲ್ಲಿಯೂ ಇದೇ ಸ್ಥಿತಿ ಪುನರಾವರ್ತನೆಯಾಗಿ, ನಾಗರಿಕರು ದೈನಂದಿನ ಜೀವನದಲ್ಲಿ ಭಾರೀ ಅಡಚಣೆಯನ್ನು ಎದುರಿಸಿದ್ದರು.
ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ, ವರ್ತೂರು–ಪಣತ್ತೂರು ಭಾಗಕ್ಕೆ ಸರಿಯಾದ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಒದಗಿಸದಿದ್ದರೆ ಗೃಹ ನಿರ್ಮಾಣ ಪ್ರಾಧಿಕಾರ ಅಥವಾ GBA ಆಸ್ತಿ ತೆರಿಗೆ ಸಂಗ್ರಹಿಸದಂತೆ ಸರ್ಕಾರ ಆದೇಶಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಪ್ರದೇಶದಿಂದ ಮಾತ್ರ ವರ್ಷಕ್ಕೆ ₹800 ಕೋಟಿ ತೆರಿಗೆ ಪಾವತಿಯಾಗುತ್ತಿದ್ದು, ಇದೇ ವಿಷಯವಾಗಿ ಸ್ಥಳೀಯರು ಈ ಹಿಂದೆ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ ಸಮಸ್ಯೆ ಇಂದಿಗೂ ಬಗೆಹರಿಯದಿರುವುದರಿಂದ ನಾಗರಿಕರ ಅಸಮಾಧಾನ ಈಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ