ಭಾರತದ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಬಾಹ್ಯಾಕಾಶಕ್ಕೆ ಪ್ರಯಾಣಿಸಿ, ಭೂಮಿಗೆ ವಾಪಸ್ಸಾಗಿದ್ದಾರೆ. ಇವರು ಭಾಗವಹಿಸಿದ್ದ ಆಕ್ಸಿಯಮ್-4 ಮಿಷನ್ ಇದೀಗ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಡ್ರ್ಯಾಗನ್ ಕ್ಯಾಪ್ಸೂಲ್ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿದಿದೆ.
ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಗಳು ಕೂಡಾ ನಡೆಸಲಾಗಿದೆ. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದ ಘಟ್ಟವಾಗಿದೆ. ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸೂಲ್ ಮೂಲಕ ಇವರನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿದ್ದು, ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಕಾಲದಲ್ಲಿ ತಲುಪಿ, 18 ದಿನಗಳ ಕಾಲ ನಿಲ್ದಾಣದಲ್ಲಿ ವಾಸ್ತವ್ಯವಿಟ್ಟು ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಂಡಿದ್ದಾರೆ.
ಶುಭಾಂಶು ಶುಕ್ಲಾ ಅವರ ಈ ಸಾಧನೆ ಎಷ್ಟು ದೊಡ್ಡದಂದರೆ, 43 ವರ್ಷಗಳ ನಂತರ ಬಾಹ್ಯಾಕಾಶ ತಲುಪಿದ ಭಾರತೀಯ ಎಂಬ ಗೌರವ ಅವರಿಗೆ ದೊರಕಿದೆ. ಈ ಹಿಂದೆ 1980ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ್ದರೆ, ಇದೀಗ 2025ರಲ್ಲಿ ಶುಕ್ಲಾ ಅವರು ಐಎಸ್‌ಎಸ್ ತಲುಪಿದ ಮೊದಲ ಭಾರತೀಯರಾಗಿದ್ದಾರೆ.
ISS, ಇದುವರೆಗೆ ಸುಮಾರು 150 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಖರ್ಚಿನಿಂದ ನಿರ್ಮಾಣಗೊಂಡಿರುವ ಅತ್ಯಂತ ಪ್ರಬಲ ಬಾಹ್ಯಾಕಾಶ ಲ್ಯಾಬ್ ಆಗಿದ್ದು, ಈ ಪ್ರಯಾಣಕ್ಕೆ ಭಾರತವು 70 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಿದೆ. ಈ ಸಮಯದಲ್ಲಿ ಶುಭಾಂಶು ಶುಕ್ಲಾ ಐಎಸ್‌ಎಸ್‌ನಲ್ಲಿ ನಡೆಸಿದ ಸಂಶೋಧನೆಗಳಲ್ಲಿ ಜೀವಶಾಸ್ತ್ರ, ದ್ರವ ಗತಿಶಾಸ್ತ್ರ, ಹಾಗೂ ಕ್ಷುದ್ರ ಗುರುತ್ವಾಕರ್ಷಣೆಯಲ್ಲಿನ ಜೀವಕೋಶಗಳ ವ್ಯವಹಾರ ಇತ್ಯಾದಿಗಳ ಮೇಲೆ ಒತ್ತು ನೀಡಲಾಯಿತು.
ಅಂದಾಜು 12.2 ಮಿಲಿಯನ್ ಕಿಲೋಮೀಟರ್ ದೂರವನ್ನು ಅವರು ಈ ಬಾಹ್ಯಾಕಾಶ ಪ್ರಯಾಣದಲ್ಲಿ ಪೂರೈಸಿದ್ದು, ಭೂಮಿಯ ಸುತ್ತ ಸುಮಾರು 288 ಬಾರಿ ತಿರುಗಿದ್ದಾರೆ. ಒಟ್ಟು 433 ಗಂಟೆಗಳ ಕಾಲ ಅವರು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇನ್ನು ಇವರ ಆಗಮನದಿಂದ ಶುಭಾಂಶು ಶುಕ್ಲಾ ಅವರ ತಂದೆ ತಾಯಿ ಸಂತೋಷ್ ವ್ಯಕ್ತ ಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ