- Advertisement -
ರಾಜ್ಯದಲ್ಲಿ ಮಾದಕವಸ್ತುಗಳ ಸಾಗಣೆ ಅಥವಾ ಸೇವನೆ ತಡೆಗೆ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಡ್ರಗ್ ಟೆಸ್ಟಿಂಗ್ ಕಿಟ್ ಗಳನ್ನು ಬಳಸಿ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಬೇಕು. ಮಾದಕ ವಸ್ತು ಅಥವಾ ಸೇವನೆ ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚಿಗೆ ವಿಧಾನಸೌಧ ಸಭಾಂಗಣದಲ್ಲಿ ನಡೆದ 6ನೇ ರಾಜ್ಯ ಮಟ್ಟದ ನಾರ್ಕೊ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಶಾಲಿನಿ ರಜನೀಶ್ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮ್ಯಾಪ್ ಡ್ರಗ್ಸ್ ಆ್ಯಪ್ ಬಳಕೆಯ ತರಬೇತಿ ನೀಡಿ, ಪ್ರತಿ ಜಿಲ್ಲೆಗಳಿಗೂ ಮಾದಕವಸ್ತುಗಳ ನಿಯಂತ್ರಣಕ್ಕೆ ಗುರಿ ನಿಗದಿಪಡಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಿವಿ ತುಂಬಬೇಡ : ಎಚ್ಚರಿಕೆಯೋ? ಉದ್ದೇಶ ಪೂರ್ವಕವೋ?
ಮಾದಕ ವಸ್ತುಗಳ ತಡೆಗೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡದಲ್ಲಿಯೂ ಲಭ್ಯವಾಗುವಂತೆ ವೆಬ್ ಸೈಟ್ ನವೀಕರಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳು ಬೆಳಗಾವಿ ಜಿಲ್ಲೆ ಅನುಸರಿಸುತ್ತಿರುವ ಕ್ರಮವನ್ನು ಮಾದರಿಮಾಡಿಕೊಳ್ಳಬೇಕು. ಮಾದಕ ವಸ್ತುಗಳ ಕಳ್ಳ ಸಾಗಣೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಕಸ್ಟಮ್ಸ್ ಅಧಿಕಾರಿಗಳನ್ನು ಸಮಿತಿಗೆ ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದರ ಜೊತೆಗೆ ನೋಂದಾಯಿಸದ ಔಷಧ ಕಂಪನಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಎಲ್ಲ ಔಷಧ ಅಂಗಡಿಗಳ ಮುಂದೆ ವೈದ್ಯರ ಅನುಮತಿ ಇಲ್ಲದೆ ಮಾರಾಟ ನಿಷೇಧ ಫಲಕ ಕಡ್ಡಾಯವಾಗಿ ಅಳವಡಿಸಲು ಕ್ರಮ ಜರುಗಿಸಬೇಕು. ವ್ಯಸನ ಮುಕ್ತ ಕೇಂದ್ರಗಳ ನಿರ್ವಹಣೆಗೆ ಸುಧಾರಿತ ಕಾರ್ಯಚರಣೆ ವಿಧಾನ ರೂಪಿಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಕೇಂದ್ರವೊಂದಕ್ಕ ಭೇಟಿ ನೀಡಿ, ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ
- Advertisement -