ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಂದರೆ ED ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಲಬುರಗಿಯಲ್ಲಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ನಿವಾಸದ ಮೇಲೆ ಕೇಂದ್ರೀಯ ಭದ್ರತಾ ಪಡೆಯ ಬಿಗಿ ಭದ್ರತೆಯಲ್ಲಿ ಇ.ಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಪಶು ವೈದ್ಯಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಣಕ್ಕಿಳಿದಿರುವ ಇ.ಡಿ ಅಧಿಕಾರಿಗಳು, ಶಿವಶಂಕರಪ್ಪ ಅವರ ನಿವಾಸದ ಮೇಲೆ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಏಕಕಾಲಕ್ಕೆ ಮುಗಿಬಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕೇಂದ್ರ ಸರ್ಕಾರದ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.
ನೇಮಕಾತಿ ವೇಳೆ ನಡೆದ ಹಣಕಾಸು ವಹಿವಾಟು, ಅಕ್ರಮ ನೇಮಕಾತಿಗಳು ಹಾಗೂ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಹೈ ವೋಲ್ಟೇಜ್ ತನಿಖೆ ನಡೆಸುತ್ತಿದ್ದಾರೆ. ಮನೆಯಲ್ಲಿ ಸಿಕ್ಕಿರುವ ಬ್ಯಾಂಕ್ ಪಾಸ್‌ಬುಕ್‌ಗಳು, ಆಸ್ತಿ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಜಾಲಾಡಲಾಗುತ್ತಿದ್ದು, ಹಗರಣದ ಮೂಲ ಬೇರುಗಳನ್ನು ಹುಡುಕುವ ಕೆಲಸ ಭರದಿಂದ ಸಾಗಿದೆ.
ಕೇವಲ ಕಲಬುರಗಿ ಮಾತ್ರವಲ್ಲದೆ, ರಾಜ್ಯದ ಒಟ್ಟು 8 ಜಿಲ್ಲೆಗಳ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕಡತಗಳನ್ನು ಜಾಲಾಡುತ್ತಿದ್ದಾರೆ. ಕಲಬುರಗಿಯಲ್ಲಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರ ನಿವಾಸದ ಮೇಲೆ ಕೇಂದ್ರೀಯ ಭದ್ರತಾ ಪಡೆಯ ಬಿಗಿ ಭದ್ರತೆಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವಿಶೇಷವೆಂದರೆ, ದಾಳಿ ನಡೆದ ವೇಳೆ ಶಿವಶಂಕರಪ್ಪ ಅವರು ತಮ್ಮ ಮಗಳ ಮನೆಯಲ್ಲೇ ಇದ್ದು, ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ಜೊತೆಗೆ ‘ಕೆಪಿಎಸ್‌ಸಿ ಸದಸ್ಯೆಯರ ಮನೆಗಳ ಮೇಲೂ ಇ.ಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಹೌದು ‘ಪಶು ವೈದ್ಯಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಆಕಾಂಕ್ಷಿ ಹಾಗೂ ಅರ್ಹ ಅಭ್ಯರ್ಥಿಗಳಿಂದ ಬರೋಬ್ಬರಿ 70 ರಿಂದ 80 ಲಕ್ಷ ರೂಪಾಯಿಗಳವರೆಗೆ ಹಣ ವಸೂಲಿ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಹಣ ನೀಡಿದ ಅಭ್ಯರ್ಥಿಗಳಿಗೂ ಸಹ ಸದ್ಯ ಇ.ಡಿ ದೊಡ್ಡ ಶಾಕ್ ಅನ್ನೇ ಕೊಟ್ಟಿದೆ ಅಂತ ಹೇಳಬಹುದು..




